Woman’s Day: ‘ಕಲ್ಪನಾ ಚಾವ್ಲಾ’ ಎಂಬ ಭಾರತೀಯ ಪ್ರಥಮ ಮಹಿಳಾ ಗಗನಯಾತ್ರಿ

Kalpana Chawla an inspiration to all girls

ಮಹಿಳೆಯೆಂದರೆ ಮನೆಗೆಲಸಕ್ಕೆ ಮಾತ್ರಯೋಗ್ಯಳು ಎಂಬ ಕಾಲವೊಂದಿತ್ತು. ಅಂದಿನಿಂದಲೂ ಮಡದಿಯಾಗಿ, ತಾಯಿಯಾಗಿ ಸಮಾಜದ ಮುಂದೆ ಯೋಗ್ಯರಾದ ವ್ಯಕ್ತಿಗಳನ್ನು ರೂಪಿಸುವ ಜವಾಬ್ದಾರಿಯ ಹೊರೆಯನ್ನು ಹೊತ್ತಿದ್ದಳು. ಆದರೆ ಇಂದು ಹಾಗಲ್ಲಾ, ಆಕೆಯು ತನ್ನ ಶಕ್ತಿಯನ್ನು ತೋರದ ಕ್ಷೇತ್ರಗಳಿಲ್ಲಾ. ಹೆಣ್ಣೆಂದರೆ ಹಾಗೆ ಆಕೆಗಿರುವ ಸ್ಥೈರ್ಯ, ಧೈರ್ಯಕ್ಕೆ ಸರಿಸಾಟಿಯೇ ಇಲ್ಲಾ. ಆಕೆಯ ಸಾಮರ್ಥ್ಯ ಮತ್ತು ಸಾಹಸಕ್ಕೆ ಆಕೆಯೇ ಸರಿ ಸಾಟಿ. ಇಂತಹ ಮಹಿಳೆಗೆ ಗೌರವವನ್ನು ಸೂಚಿಸಲು ಪ್ರತಿವರ್ಷ ಮಾರ್ಚ್ 08 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಗಗನಯಾನ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದ ‘ಕಲ್ಪನಾ ಚಾವ್ಲಾ‘ ಅವರ ಕುರಿತಾಗಿ ಚಿಕ್ಕದಾಗಿ ತಿಳಿಸಿಕೊಡುವ ಒಂದು ಪ್ರಯತ್ನ…

ಕಲ್ಪನಾ ಚಾವ್ಲಾ ಗಗನಯಾತ್ರಿಯಾಗಿರುವ ಎರಡನೆಯ ಭಾರತೀಯರು ಮತ್ತು ಪ್ರಥಮ ಮಹಿಳಾ ಗಗನಯಾತ್ರಿಯಾಗಿದ್ದಾರೆ. ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾದಲ್ಲಿ ಉನ್ನತ ಹುದ್ದೆಯನ್ನು ಪಡೆದು, ಎರಡುಬಾರಿ ಗಗನಯಾನವನ್ನು ಮಾಡಿ ದೇಶಕ್ಕೆ ಮತ್ತು ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ. ನಮ್ಮ ದೇಶದಿಂದ ಅಮೇರಿಕಾಕ್ಕೆ ಹೋಗಿ ಅಲ್ಲಿಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೊಂದರಲ್ಲಿ ಸ್ಥಾನ ಪಡೆದು ಇಂತಹ ಸಾಧನೆ ಮಾಡುವ ಮೂಲಕ ಹಲವರಿಗೆ ಮಾದರಿಯಾಗಿ ಉಳಿದುಕೊಂಡಿದ್ದಾರೆ.

ಕಲ್ಪನಾ ಅವರ ಬಾಲ್ಯ ಮತ್ತು ಶಿಕ್ಷಣ

Kalpana Chawla an inspiration to all girls


ಆಗಿನ ಪಂಜಾಬ್ (ಇಂದಿನ ಹರ್ಯಾಣ) ರಾಜ್ಯದ ಕರ್ನಾಲ್ ಎಂಬ ಚಿಕ್ಕ ಪಟ್ಟಣದಲ್ಲಿನ ಬನಾರಸಿಲಾಲ್ ಚಾವ್ಲಾ ಮತ್ತು ಸಂಜ್ಯೋತಿ ಚಾವ್ಲಾ ದಂಪತಿಗಳ ಮಗಳಾಗಿ ಮಾರ್ಚ್ 17, 1962 ರಲ್ಲಿ ಜನಿಸಿದರು. ಇವರು ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣವನ್ನು ತಮ್ಮ ಕರ್ನಾಲ್ ನಲ್ಲಿಯೇ ಮುಗಿಸಿ, ಚಂಡೀಗಢ ಪಂಜಾಬ್ ನ್ಯಾಷನಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವೈಮಾನಿಕ ಶಾಸ್ತ್ರ(ಏರೋನಾಟಿಕಲ್ ಇಂಜಿನಿಯರಿಂಗ್)ನಲ್ಲಿ  1982 ರಲ್ಲಿ ಪದವಿಯನ್ನು ಪಡೆದರು. ನಂತರ ಉನ್ನತ ಶಿಕ್ಷಣ ಪಡೆಯುವ ಸಲುವಾಗಿ ಅಮೆರಿಕಾಕ್ಕೆ ತೆರಳಿ ಟೆಕ್ಸಸ್ ವಿಶ್ವವಿದ್ಯಾಲಯದಿಂದ 1984 ರಲ್ಲಿ ವೈಮಾನಿಕ ಶಾಸ್ತ್ರ ವಿಷಯದಲ್ಲಿ ಮಾಸ್ಟರ್ ಆಫ್ ಸೈನ್ಸ್ ಪದವಿಯನ್ನು ಪಡೆದುಕೊಂಡರು. ಬಳಿಕ 1986 ರಲ್ಲಿ ಕೊಲರಾಡೋ ವಿಶ್ವವಿದ್ಯಾಲಯದಲ್ಲಿ ಎರಡನೇ ಮಾಸ್ಟರ್ ಪದವಿ ಪಡೆದು,  1988 ರಲ್ಲಿ ಪಿ.ಹೆಚ್.ಡಿ.ಪದವಿಯನ್ನು ಪಡೆದುಕೊಂಡರು.

ನಾಸಾದಲ್ಲಿ ವೃತ್ತಿ ಮತ್ತು ಸಾಧನೆ

ಕಲ್ಪನಾ ಚಾವ್ಲಾ ಅವರ ಶಿಕ್ಷಣ ಮತ್ತು ಅವರಿಗಿದ್ದ ವೈಮಾನಿಕ ಶಾಸ್ತ್ರದ ಕುರಿತಾದ ಅವರಿಗಿದ್ದ ಆಸಕ್ತಿಯನ್ನು ಪರಿಗಣಿಸಿ ನಾಸಾದಂತಹ ಸಂಸ್ಥೆಯು ಉದ್ಯೋಗವನ್ನು ಒದಗಿಸಿಕೊಟ್ಟಿತು. ಗಗನ ಯಾತ್ರಿಯಾಗಿ ಹೊರಹೊಮ್ಮುವ ಮೊದಲು ನಾಸಾದ ಸಂಶೋಧನಾ ಕೇಂದ್ರದ ಓವರ್ ಸೆಟ್ ಮಾದರಿಯ ಉಪಾಧ್ಯಕ್ಷರಾಗಿಯೂ ಸೇವೆಯನ್ನು ಸಲ್ಲಿಸಿದರು. ಅಲ್ಲಿ ರಾಕೇಟುಗಳು ನೇರವಾಗಿ ಮೇಲೇರುವ ತಂತ್ರಜ್ಞಾನದ ಕುರಿತಾಗಿ ಅಧ್ಯಯನವನ್ನು ಮಾಡಿದರು. ಅಲ್ಲದೇ ಸಮುದ್ರದಿಂದ ನೇರವಾಗಿ ಗಾಳಿಗೆ ನೆಗೆಯುವ ವಾಯುನೌಕೆಗಳಿಗೆ ತರಬೇತುದಾರರಾಗಿಯೂ ಕಾರ್ಯನಿರ್ವಹಿಸಿದರು.

ವಿವಾಹ ಮತ್ತು ಅಮೇರಿಕಾ ಪೌರತ್ವ

Kalpana Chawla an inspiration to all girls


ಕಲ್ಪನಾ ಚಾವ್ಲಾ ಅವರು 1983 ರಲ್ಲಿ ವಾಯುಯಾನ ಲೇಖಕರಾದ ಜೀನ್ ಪಿಯರ್ ಹ್ಯಾರಿಸನ್ ಅವರನ್ನು ಮದುವೆಯಾದರು. ನಂತರ 1991ರಲ್ಲಿ ಅಮೇರಿಕಾ ಇವರಿಗೆ ತನ್ನ ದೇಶದ ಪೌರತ್ವವನ್ನು ನೀಡಿತು. ಇವರು ಗಗನಯಾತ್ರಿಯಾಗಳು ಅರ್ಜಿಹಾಕಿದ ನಾಲ್ಕು ವರ್ಷಗಳ ನಂತರ ಅಂದರೆ 1995ರಲ್ಲಿ ಅವಕಾಶ ಅವರನ್ನು ಹುಡುಕಿಕೊಂಡು ಬಂದಿತು.

ಯಶಸ್ವಿ ಪ್ರಥಮ ಶಟಲ್ ಯಾನ

Space Shuttle Columbia flight STS-87 ಎಂಬ ಹೆಸರಿನ ನೌಕೆಯಲ್ಲಿ ನವೆಂಬರ್ 19, 1997 ತಮ್ಮ ಪ್ರಥಮ ಶಟಲ್ ಯಾನವನ್ನು ಪ್ರಾರಂಭಿಸಿದರು.  ಈ ಗಗನಯಾನದಲ್ಲಿ ಬಾಗಿಯಾಗಿದ್ದ ಆರು ಯಾತ್ರಿಗಳ ಪೈಕಿ ಕಲ್ಪನಾ,  ಭೂಕಕ್ಷೆಯಿಂದ ಹೊರಹೊಗಿರುವ ಪ್ರಥಮ ಭಾರತೀಯ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದರು. ಈ ಯಾತ್ರೆಯಲ್ಲಿ ಭೂಮಿಯನ್ನು 252 ಬಾರಿ ಸುತ್ತಿ, 10.4 ಮಿಲಿಯನ್ ಮೈಲುಗಳನ್ನು ಕ್ರಯಿಸಿ ಸಾಧನೆಯನ್ನು ಮಾಡಿದರು. ನಂತರ ಯಶಸ್ವಿ 372 ಗಂಟೆಗಳು (14.5 ದಿನ)  ಭೂಮಿಯಿಂದ ಹೊರಗುಳಿದು ವಾಪಸ್ಸಾದರು.

Kalpana Chawla an inspiration to all girls

ಎರಡನೆ ಶಟಲ್ – ದುರಂತದಲ್ಲಿ ಮುಗಿದ ಯಾನ

2000 ನೇ ಇಸವಿಯಲ್ಲಿ ಮತ್ತೊಮ್ಮೆ ಗಗನಯಾನಿಯಾಗಲು ಅವಕಾಶ ಅವರನ್ನು ಅರಸಿಕೊಂಡು ಬಂದಿತ್ತು. STS-107 ಎಂಬ ನೌಕೆ ಹಲವಾರು ತಾಂತ್ರಿಕ ತೊಂದರೆಗಳನ್ನು ಅನುಬವಿಸುತ್ತ ಮುಂದೂಡಲ್ಪಟ್ಟು 2003 ರ ಜನೆವರಿಯ 16 ರಂದು ಉಡ್ಡಯನಗೊಂಡಿತು. ಗುರುತ್ವಾಕರ್ಷಣೆ ಇಲ್ಲದ ಸ್ಥಿತಿಯಲ್ಲಿ ಹಲವಾರು ಪ್ರಯೋಗಗಳನ್ನು ಇವರು ನಡೆಸಬೇಕಾಗಿದ್ದು, ಅವುಗಳನ್ನು ಯಶಸ್ವಿಗೊಳಿಸಿದರು. ತಮಗೆ ನೀಡಲಾಗಿದ್ದ ಎಲ್ಲ ಕರ್ತವ್ಯಗಳನ್ನು ಪೂರೈಸಿ ಸುಮಾರು ಹದಿನೈದು ದಿನಗಳ ನಂತರ ಭೂಮಿಯ ಕಡೆಗೆ ತಮ್ಮ ಪ್ರವಾಸವನ್ನು ಪ್ರಾರಂಭಿಸಿದರು. ಆದರೆ ಭೂಮಿಗೆ ತಲುಪಲು ಇನ್ನೇನು ಹದಿನೈದು ನಿಮಿಷಗಳಿರುವಾಗ ಗುರುತ್ವಾಕರ್ಷಣೆಯ ಒತ್ತಡದಿಂದ ಉಂಟಾದ ಬಿಸಿಗೆ ಸಿಲುಕಿ ನೌಕೆಯು ಆಕಾಶದಲ್ಲಿ ಹೊತ್ತಿ ಉರಿಯಿತು. ಬೆಂಕಿಗೆ ಆಹುತಿಯಾದ ನೌಕೆ ಸಂಪೂರ್ಣ ಬೂದಿಯಾಗಿ ಏಳೂ ಯಾತ್ರಿಗಳು ಅಮರಾದರು.

ಮರಣೋತ್ತರ ಪ್ರಶಸ್ತಿಗಳು

ಕಲ್ಪನಾ ಚಾವ್ಲಾ ಅವರ ಸಾಧನೆಯನ್ನು ಗಮನಿಸಿದ ನಾಸಾ Congressional Space Medal of Honor, NASA Distinguished Service Medal, NASA Space Flight Medal ಎಂಬ ಪ್ರಶಸ್ತಿಗಳನ್ನು ಮರಣೋತ್ತರವಾಗಿ ನೀಡಿ ಗೌರವಿಸಿತು. ಅಲ್ಲದೇ ಅವರು ಬಳಸುತ್ತಿದ್ದ ಗಗನಯಾತ್ರಿ ಉಡುಪು, ಅವರು ಬಳಸುತ್ತಿದ್ದ ವಸ್ತುಗಳನ್ನು ಮತ್ತು ಪ್ರಶಸ್ತಿಗಳನ್ನು ನಾಸಾ ಸಂಗ್ರಹಾಲಯದಲ್ಲಿ ಇಟ್ಟು ಗೌರವಿಸಿದೆ.

Kalpana Chawla an inspiration to all girls

ಭಾರತದಲ್ಲಿ ಜನಿಸಿ ತಮ್ಮ ಶಿಕ್ಷಗಳನ್ನು ಪೂರೈಸಿ, ಅಮೇರಿಕಾದಂತಹ ದೇಶದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾದಲ್ಲಿ ಕೆಲಸ ಗಿಟ್ಟಿಸಿಕೊಂಡು, ಗಗನಯಾನಿಯಾಗಿ ಮಾಡಿದಂತಹ ಸಾಧನೆಗಳು ಅಪಾರ. ಅವರ ಈ ಸಾಧನೆಗಳು ಇಂತಹ ಸಾಧನೆಗಾಗಿ ಕನಸುಕಟ್ಟಿಕೊಂಡ ಹಲವರಿಗೆ ಪ್ರೇರಣೆಯಾಗಲಿ. ಕಲ್ಪನಾ ಚಾವ್ಲಾ ಅವರ ಸಾಧನೆಗಳನ್ನು ಚಿಕ್ಕದಾಗಿ ವಿವರಿಸುತ್ತಾ ಇಂದಿನ ವಿಶೇಷ ಅಂತಾರಾಷ್ಟ್ರೀಯ ಮಹಿಳಾ ದಿನದ ಸಮಯದಲ್ಲಿ ತಮ್ಮೆಲ್ಲರಿಗೂ ಶುಭಾಷಯ ತಿಳಿಸುತ್ತಿದೆ ವಾರ್ತಾವಾಣಿ ತಂಡ. ಧನ್ಯವಾದಗಳು..

LEAVE A REPLY

Please enter your comment!
Please enter your name here