ಜಮ್ಮು & ಕಾಶ್ಮೀರ: ಇಲ್ಲಿನ ಶೋಪಿಯಾನ ಜಿಲ್ಲೆಯಲ್ಲಿ ಬುಧವಾರ ಮುಂದುವರೆದ ಶೋಧ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಐವರು ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿ ಇನ್ನೂ ನಡೆಯುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ ಶೋಪಿಯಾನ ಜಿಲ್ಲೆಯಲ್ಲಿ ನಡೆದ ಮೂರನೆ ಎನ್ಕೌಂಟರ್ ಇದಾಗಿದೆ.
ಉಗ್ರರು ಅಡಗಿರುವ ಪ್ರದೇಶವನ್ನು ಸುತ್ತುವರೆದು, ಶೋಧಕಾರ್ಯಾಚರಣೆಯನ್ನು ಮುಂದುವರೆಸುತ್ತಿದ್ದಂತೆ ಅಲ್ಲಿ ಅಡಗಿರುವ ಉಗ್ರರು ಗುಂಡು ಹಾರಿಸಿದ್ದಾರೆ. ಆ ಕ್ಷಣದಲ್ಲಿ ಗುಂಡಿನ ಚಕಮಕಿ ನಡೆದು ಎನ್ಕೌಂಟರ್ ನಡೆಸಲಾಗಿದೆ. ಈ ಎನ್ಕೌಂಟರ್ ನಲ್ಲಿ ಐವರು ಉಗ್ರರು ಹತರಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.
ಇದರೊಂದಿಗೆ ಎರಡು ವಾರಗಳಲ್ಲಿ ನಡೆದ ವಿವಿಧ ಎನ್ಕೌಂಟರ್ ನಲ್ಲಿ 25 ಕ್ಕೂ ಹೆಚ್ಚು ಉಗ್ರರನ್ನು ಕೊಲ್ಲಲಾಗಿದೆ. ಏತನ್ಮಧ್ಯೆ ಯಾವುದೇ ರೀತಿಯ ಪ್ರತಿಭಟನೆಗಳು ನಡೆಯದಂತೆ ತಡೆಗಟ್ಟಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ವದಂತಿಗಳು ಹರಡುವುದನ್ನು ತಡೆಗಟ್ಟಲು ಇಂಟರ್ ನೆಟ್ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ.
ಜಿಲ್ಲೆಯಲ್ಲಿ ಸತತ ಎರಡು ದಿನಗಳ ಕಾಲ, ಭಾನುವಾರ ಮತ್ತು ಸೋಮವಾರ ಪ್ರತ್ಯೇಕ ಮುಖಾಮುಖಿ ಉಂಟಾಗಿದೆ. ಇದರಲ್ಲಿ 9 ಉಗ್ರರು ಹತರಾಗಿದ್ದಾರೆ. ಭಾನುವಾರ ಐವರು ಭಯೋತ್ಪಾದಕರು ಸಾವನ್ನಪ್ಪಿದ್ದರೆ, ಸೋಮವಾರ ನಾಲ್ಕು ಉಗ್ರರು ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ.