ಸಿಡ್ನಿ: ಉತ್ತಮ ಪ್ರದರ್ಶನ ತೋರುವ ಮೂಲಕ ಭಾರತ ತಂಡ ಟಿ-20 ವಿಶ್ವ ಕಪ್ನ ಸೂಪರ್12 ಹಂತದ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ 56 ರನ್ನುಗಳಿಂದ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಭಾರತ ತಂಡ ಪಾಯಿಂಟ್ ಪಟ್ಟಿಯಲ್ಲಿ ನಂ. 1 ಸ್ಥಾನಕ್ಕೆ ಏರಿದೆ.
ಸಿಡ್ನಿ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತ ತಂಡ, ನಾಯಕ ರೋಹಿತ್ ಶರ್ಮಾ(53), ವಿರಾಟ್ ಕೊಹ್ಲಿ (62) ಮತ್ತು ಸೂರ್ಯಕುಮಾರ್ ಯಾದವ್(51) ಇವರ ಅರ್ಧ ಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ನೆದರ್ಲೆಂಡ್ಸ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 123 ರನ್ನುಗಳನ್ನು ಮಾತ್ರ ಗಳಿಸುವಲ್ಲಿ ಶಕ್ತವಾಯಿತು. ಈ ಮೂಲಕ ಭಾರತ 56 ರನ್ನುಗಳ ಭರ್ಜರಿ ಗೆಲುವನ್ನು ದಾಖಲಿಸಿತು.
ಪಾಕ್ ವಿರುದ್ಧದ ಪಂದ್ಯದಂತೆಯೇ ಆರಂಭಿಕರಾಗಿ ಕಣಕ್ಕಿಳಿದ ಕೆ ಎಲ್ ರಾಹುಲ್ ಮತ್ತೊಮ್ಮೆ ರನ್ ಕಲೆಹಾಕುವಲ್ಲಿ ವಿಫಲರಾದರು. ಮೂರನೆಯ ಓವರ್ ನಲ್ಲಿ ಪಾಲ್ ವ್ಯಾನ್ ಮೀಕರೆನ್ ಅವರ ಎಸೆತದಲ್ಲಿ ರಾಹುಲ್ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದರು. ರೋಹಿತ್ ನಿಧಾನವಾಗಿ ಇನ್ನಿಂಗ್ಸ್ ಆರಂಭಿಸಿ ಅರ್ಧ ಶತಕ ಗಳಿಸಿ 12 ನೇಯ ಓವರ್ ನಲ್ಲಿ ವಿಕೆಟ್ ಒಪ್ಪಿಸಿ ಫೆವಿಲಿಯಂ ಸೇರಿಕೊಂಡರು. ಈ ವೇಳೆಗೆ ಕೇವಲ 84 ರನ್ನಗಳಾಗಿದ್ದ ಭಾರತ ತಂಡದ ಮೊತ್ತವನ್ನು ಏರಿಸಲು ಸೂರ್ಯಕುಮಾರ್ ಯಾದವ್ ಸ್ಪೋಟಕ ಬ್ಯಾಟಿಂಗ್ ಗೆ ಇಳಿದರು. ಈ ಸಮಯದಲ್ಲಿ ಕೊಹ್ಲಿ ಮತ್ತು ಸೂರ್ಯಕುಮಾರ್ ಒಬ್ಬರಿಗಿಂತ ಒಬ್ಬರು ಜಿದ್ದಿಗೆ ಬಿದ್ದವರಂತೆ ನೆದರ್ಲೆಂಡ್ಸ್ ನ ಬೌಲರ್ಸ್ ಗಳನ್ನು ಬೌಂಡರಿ ಸಿಕ್ಸರ್ ಗಳ ಮೂಲಕ ಕಾಡಿದರು. ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೊಹ್ಲಿಯವರ ಜೊತೆಯಾಟದಿಂದಾಗಿ 95 ರನ್ನುಗಳು ಹರಿದು ಬಂದವು.
ಭಾರತೀಯ ಬೌಲರ್ ಗಳ ಮಾರಕ ದಾಳಿ
179 ರನ್ನುಗಳ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್ ತಂಡಕ್ಕೆ ಭುವನೇಶ್ವರ್ ಕುಮಾರ್ ಇಂದು ಒಂದೇ ಸಮನೆ ಕಾಡಿದರು. ಆರಂಭದಲ್ಲಿ ಎರಡು ಓವರ್ ಮೇಡನ್ ಓವರ್ ಮಾಡಿದ್ದಲ್ಲದೇ ಮೊದಲ ವಿಕೆಟ್ ಕಿತ್ತುಕೊಂಡರು. ಪಾಕ್ ತಂಡದ ವಿರುದ್ಧ ವಿಫಲರಾಗಿದ್ದ ಅಕ್ಷರ್ ಪಟೇಲ್ ಕೂಡ ತಮ್ಮ ಮೊದಲ ಓವರ್ನಲ್ಲೇ ವಿಕೆಟ್ ಹಾರಿಸುವಲ್ಲಿ ಯಶಸ್ವಿಯಾದರು. ಈ ಸಮಯದಲ್ಲಿ ನೆದರ್ಲೆಂಡ್ಸ್ ತಂಡ ಕೇವಲ 20 ರನ್ನುಗಳಿಗೆ ತಮ್ಮ 2 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
Awesome.. 🤗 😍 pic.twitter.com/hh9qQ1IHWP
— Cric8fanatic🏏 (@cric8fanatic) October 27, 2022
ಇದೆ ಸಮಯದಲ್ಲಿ ನೆದರ್ಲೆಂಡ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಆಟಕ್ಕೆ ಇಳಿದ ಕಾಲಿನ್ ಅಕೆರ್ಮನ್ ಪಂದ್ಯದ ಗತಿ ಬದಲಿಸಲು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ಕೇವಲ 17 ರನ್ನುಗಳನ್ನು ಗಳಿಸುತ್ತಿದ್ದಂತೆ ಅಶ್ವಿನ್ ಸ್ಪಿನ್ ಮೋಡಿಗೆ ಒಳಗಾದರು. ನೆದರ್ಲೆಂಡ್ಸ್ ತಂಡದ ಪರವಾಗಿ 20 ರನ್ನುಗಳನ್ನು ಗಳಿಸಿ ಪ್ರಿಂಗಲ್ ತಂಡದ ಪರವಾಗಿ ಅತ್ಯಧಿಕ ರನ್ ಗಳಿಸಿದ ಆಟಗಾರನೆನಿಸಿಕೊಂಡರು. ನಂತರ ಒಬ್ಬರ ಹಿಂದೆ ಒಬ್ಬರಂತೆ ಫೆವಿಲಿಯಂ ಸೇರಿಕೊಂಡರು. ಭಾರತದ ಪರ ಭುವನೇಶ್ವರ್ ಕುಮಾರ್, ಅರ್ಶದೀಪ್ ಸಿಂಗ್, ಅಕ್ಷರ್ ಪಟೇಲ್ ಮತ್ತು ಆರ್ ಅಶ್ವಿನ್ ತಲಾ 2 ವಿಕೆಟ್ ಪಡೆದರೆ ಶಮಿ 1 ವಿಕೆಟ್ ಪಡೆದುಕೊಂಡರು.