ನವದೆಹಲಿ: ದೇಶೀಯ ಉತ್ಪನ್ನಗಳಿಗೆ ಉತ್ತೇಜನ ಮತ್ತು ಚೀನಾ ಟಿವಿಗಳ ಆಮದನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರಕಾರ ನಿರ್ಬಂಧವನ್ನು ಹೇರಿದೆ. ಇದರಿಂದಾಗಿ ಚೀನಾದ ಕಂಪನಿಗಳಿಗೆ ದೊಡ್ಡ ಮಟ್ಟದಲ್ಲಿ ಹೊಡೆತ ಉಂಟಾಗಲಿದೆ.
ಭಾರತದಲ್ಲಿ ವಿದೇಶಿ ಟಿವಿಗಳ ಕರೀದಿಯ ಪ್ರಮಾಣ ಹೆಚ್ಚಾಗಿದ್ದು, ಈ ಮೂಲಕ 2019-20 ನೇ ಸಾಲಿನಲ್ಲಿ ಸುಮಾರು 781 ಮಿಲಿಯನ್ ಯುಎಸ್ ಡಾಲರ್ ಮೊತ್ತದ ಆಮದನ್ನು ಮಾಡಿಕೊಂಡಿದೆ. ಇವುಗಳಲ್ಲಿ ಚೀನಾ ಮತ್ತು ವಿಯೆಟ್ನಾಂ ದೊಡ್ಡ ಪಾಲನ್ನು ಹೊಂದಿದ್ದು, ಈ ನಿರ್ಬಂಧದಿಂದ ದೊಡ್ಡ ಹೊಡೆತ ಅನುಭವಿಸಲಿವೆ. ಚೀನಾ ಮತ್ತು ವಿಯೆಟ್ನಾಂ ದೇಶಗಳಿಂದ ಸುಮಾರು 428 ಮಿಲಿಯನ್ ಯುಎಸ್ ಡಾಲರ್ ನಷ್ಟು ಮತ್ತು ಇನ್ನುಳಿದ ದೇಶಗಳಿಂದ 293 ಮಿಲಿಯನ್ ಯುಎಸ್ ಡಾಲರ್ ಮೊತ್ತದ ಆಮದನ್ನು ಭಾರತ ಮಾಡಿಕೊಳ್ಳುತ್ತಿದೆ. ಇವುಗಳನ್ನು ನಿಯಂತ್ರಿಸುವ ಮೂಲಕ ಭಾರತದಲ್ಲಿ ತಯಾರಾಗುವ ಟಿವಿಗಳ ಬೇಡಿಕೆಯು ಹೆಚ್ಚಾಗಲಿದ್ದು, ಇಲ್ಲಿನ ಕಂಪನಿಗಳ ಉತ್ಪಾದನಾ ಶಕ್ತಿ ವೃದ್ಧಿಯಾಗಲಿದೆ.
ಭಾರತಕ್ಕೆ ಚೀನಾ ಮಾತ್ರವಲ್ಲದೆ ವಿಯೆಟ್ನಾಂ, ಕೊರಿಯಾ, ಇಂಡೋನೇಶಿಯಾ, ಮಲೇಶಿಯಾ, ಜರ್ಮನಿ ಮತ್ತು ಥೈಲ್ಯಾಂಡ್ ಗಳಿಂದಲೂ ಎಲ್.ಸಿ.ಡಿ. ಟಿವಿಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಕುರಿತಂತೆ ವಿದೇಶ ವ್ಯಾಪಾರ ಪ್ರಧಾನ ನಿರ್ದೇಶನಾಲಯ ಪ್ರಕಟಣೆ ಹೊರಡಿಸಿದ್ದು, ಇನ್ನು ಮುಂದೆ ನಿಷೇದಿತ ಪಟ್ಟಿಗೆ ಸೇರಿಸಿದ ಟಿವಿಗಳನ್ನು ಆಮದು ಮಾಡುವಂತಿಲ್ಲ ಎಂದು ತಿಳಿಸಿದೆ. ಇದರಿಂದಾಗಿ ದೇಶೀಯ ಮತ್ತು ದೇಶೀಯ ಅಸೆಂಬ್ಲಿಂಗ್ ಟಿವಿಗಳ ತಯಾರಿಕೆ ಹೆಚ್ಚಲಿದ್ದು, ಉತ್ತಮ ಗುಣಮಟ್ಟ ಹೊಂದಿರಲಿದೆ ಎಂದು ಅಭಿಪ್ರಾಯ ಪಟ್ಟಿದೆ.