including-2-cases-in-karnataka-40-cases-of-delta-plus-covid-variant-in-4-states

ನವದೆಹಲಿ: ಕರ್ನಾಟಕದಲ್ಲಿ 2 ಪ್ರಕರಣ ಸೇರಿದಂತೆ ದೇಶಾದ್ಯಂತ ಮಾರಕ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರಿಯ 40 ಸೋಂಕು ಪ್ರಕರಣಗಳು ಪತ್ತೆಯಾಗಿರುವ ಕುರಿತು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಆತಂಕ ಹೆಚ್ಚಾಗಿದ್ದು, ಮೂರನೆ ಅಲೆಯ ಆರಂಭ ಇರಬಹುದೇ ಎಂಬ ಸಂಶಯ ಕಾಡಲಾರಂಭಿಸಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ದೇಶಾದ್ಯಂತ ಒಟ್ಟು 40 ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಪ್ರಕರಣಗಳು ವರದಿಯಾಗಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ 21 ಪ್ರಕರಣಗಳು ವರದಿಯಾಗಿದ್ದು, ನಂತರದ ಸ್ಥಾನದಲ್ಲಿರುವ ಮಧ್ಯ ಪ್ರದೇಶದಲ್ಲಿ 6, ಕೇರಳ ಮತ್ತು ತಮಿಳುನಾಡಿನಲ್ಲಿ ತಲಾ 3 ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಕರ್ನಾಟಕದಲ್ಲಿ ಮೈಸೂರು ಮತ್ತು ಬೆಂಗಳೂರಿನಲ್ಲಿ ತಲಾ ಒಂದೊಂದು ಪ್ರಕರಣಗಳು ಸೇರಿದಂತೆ ಎರಡು ಪ್ರಕರಣಗಳು ವರದಿಯಾಗಿದ್ದು, ಪಂಜಾಬ್, ಆಂಧ್ರಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ 1 ಪ್ರಕರಣ ವರದಿಯಾಗಿವೆ.

ಈ ಹಿಂದೆ ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ 2ನೇ ಅಲೆಗೆ ಕಾರಣವಾಗಿದ್ದ ಡೆಲ್ಟಾ ರೂಪಾಂತರಿ ಸೋಂಕು ಪ್ರಭಾವ ಇದೀಗ ಕಡಿಮೆಯಾಗುತ್ತಿದ್ದು, ದೇಶದಲ್ಲಿ ನಿಧಾನಗತಿಯಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಕುಸಿತವಾಗುತ್ತಿದೆ. ಆದರೆ ದಿನ ಕಳೆದಂತೆ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ದೇಶದಲ್ಲಿ 3ನೇ ಅಲೆಯ ಭೀತಿ ಹೆಚ್ಚಿಸಿದೆ.

ಇನ್ನು ತಜ್ಞರು ಅಭಿಪ್ರಾಯಪಟ್ಟಿರುವಂತೆ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು, ಲಸಿಕೆ ಹಾಗೂ ಕೋವಿಡ್‌ನಿಂದಾಗಿ ಮನುಷ್ಯನು ಪಡೆದ ಪ್ರತಿಕಾಯದ ಶಕ್ತಿಯನ್ನೂ ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಡೆಲ್ಟಾ ಪ್ಲಸ್‌ (ಎವೈ.1 ರೂಪಾಂತರಿ ಅಥವಾ ಬಿ.1.617.2.1) ಅನ್ನು ಕೊರೊನಾದ ಅತ್ಯಂತ ಅಪಾಯಕಾರಿ ಸ್ವರೂಪ ಎಂದು ವಿಜ್ಞಾನಿಗಳು ಬಣ್ಣಿಸಿದ್ದಾರೆ. ಈಗಾಗಲೇ ಮಹಾರಾಷ್ಟ್ರ, ಕೇರಳ ಮತ್ತು ಮಧ್ಯಪ್ರದೇಶಗಳಲ್ಲಿ ಈ ರೂಪಾಂತರಿಯು ಸದ್ದು ಮಾಡಲಾರಂಭಿಸಿದೆ.

LEAVE A REPLY

Please enter your comment!
Please enter your name here