ಹಿಮಾಚಲ ಪ್ರದೇಶದ ಸಿಎಂ ಜೈರಾಮ್ ಠಾಕೂರ್ ರಾಜೀನಾಮೆ

himachal-pradesh-cm-jairam-thakur-resigns

ಶಿಮ್ಲಾ: ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ಹೊರಬಿದ್ದಿದು, ಬಿಜೆಪಿ ಅಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಈ ಕಾರಣದಿಂದಾಗಿ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ, ಬಿಜೆಪಿ ಈ ಬಾರಿ ಗೆಲ್ಲಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ ತೀವ್ರ ಆಡಳಿತ ವಿರೋಧಿ ಅಲೆಯನ್ನು ಅನುಭವಿಸಿ ಚುನಾವಣೆಯಲ್ಲಿ ಹಿನ್ನಡೆಯಾಗಿದೆ. ಸೋಲನ್ನು ಕಂಡಿರುವ ಬಿಜೆಪಿಯ ಹಾಲಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರು ಇಂದು ಸಂಜೆ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕೂರ್, “ನಾನು ನನ್ನ ರಾಜೀನಾಮೆಯನ್ನು ರಾಜ್ಯಪಾಲರಿಗೆ ನೀಡಿದ್ದೇನೆ. ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವುದನ್ನು ಎಂದಿಗೂ ನಿಲ್ಲಿಸುವುದಿಲ್ಲ. ನಾವು ಸೋಲಿನ ಪರಾಮರ್ಶೆ ಮಾಡಬೇಕಾಗಿದೆ. ಕೆಲವು ವಿಚಾರಗಳು ಫಲಿತಾಂಶದ ದಿಕ್ಕನ್ನು ಬದಲಾಯಿಸಿವೆ ಎಂದು ಹೇಳಿದರು.

ಹಿಮಾಚಲದ ವಿಧಾನ ಸಭೆಯು 68 ಸ್ಥಾನಗಳನ್ನು ಹೊಂದಿದ್ದು, ಅಧಿಕಾರವನ್ನು ಹಿಡಿಯಲು 35 ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ಅವಶ್ಯವಾಗಿದೆ. ಆದರೆ ಆಡಳಿತರೂಢ ಬಿಜೆಪಿ 25 ಸ್ಥಾನ ಪಡೆದರೆ, ಪ್ರತಿಪಕ್ಷ ಕಾಂಗ್ರೆಸ್ 40 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಐದು ವರ್ಷಗಳ ನಂತರ ಮತ್ತೆ ಅಧಿಕಾರಕ್ಕೇರಲಿದೆ.

ಇದನ್ನೂ ಓದಿರಿ: ಆಮ್ ಆದ್ಮಿ ಪಕ್ಷವನ್ನು ರಾಷ್ಟ್ರೀಯ ಪಕ್ಷವೆಂದು ಅರವಿಂದ್ ಕೇಜ್ರಿವಾಲ್ ಘೋಷಣೆ

LEAVE A REPLY

Please enter your comment!
Please enter your name here