ರಾಜ್ಯದ ಶಾಲೆ, ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮುಂದುವರಿಕೆ: ಶಿಕ್ಷಣ ಸಚಿವ ನಾಗೇಶ್

ಹಿಜಾಬ್ ವಿವಾದ ಕುರಿತು ಸುಪ್ರೀಂ ಕೋರ್ಟ್ ಸ್ಪಷ್ಟ ತೀರ್ಪು ನೀಡಿಲ್ಲ. ಹಾಗಾಗಿ ರಾಜ್ಯ ಹೈಕೋರ್ಟ್ ತೀರ್ಪು ಊರ್ಜಿತ ಆಗಿರುತ್ತದೆ. ಶಾಲೆ, ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸುವ ಹಳೆಯ ಸುತ್ತೋಲೆಯೇ ಮುಂದುವರಿಯುತ್ತದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.

hijab-ban-continues-in-schools-and-colleges-says-education-minister-bc-nagesh

ಬೆಂಗಳೂರು: ಹಿಜಾಬ್ ಕುರಿತು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದಲ್ಲಿ ಸಹಮತ ಮೂಡದೆ ಪೂರ್ಣ ಪೀಠಕ್ಕೆ ವರ್ಗಾವಣೆ ಆಗಿದೆ. ಆದರೆ ರಾಜ್ಯದ ಶಾಲೆ, ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಮುಂದುವರಿಯುತ್ತದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಸ್ಪಷ್ಟಪಡಿಸಿದ್ದಾರೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತ ಮತ್ತು ಸುಧಾಂಶು ಧುಲಿಯಾ ಅವರ ದ್ವಿಸದಸ್ಯ ಪೀಠ ಇಂದು ಹಿಜಾಬ್ ಕುರಿತು ವಿಭಜಿತ ತೀರ್ಪು ಪ್ರಕಟಿಸಿದ್ದಾರೆ. ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು, ಹಿಜಾಬ್ ಧರಿಸುವುದು ಅಂತಿಮವಾಗಿ ಆಯ್ಕೆಯ ಸ್ವಾತಂತ್ರ್ಯವಾಗಿದೆ. ನನ್ನ ಮನಸ್ಸಿನಲ್ಲಿ ಮುಖ್ಯವಾಗಿ ಹೆಣ್ಣು ಮಗುವಿನ ಶಿಕ್ಷಣ ಕಾಳಜಿ ಇದೆ ಎಂದು ಹೇಳಿದ್ದಾರೆ. ಆದರೆ ನ್ಯಾಯಮೂರ್ತಿ ಹೇಮಂತ್ ಗುಪ್ತ ಅವರು, ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎಲ್ಲ 26 ಅರ್ಜಿಗಳನ್ನು ವಜಾ ಮಾಡಿದರು. ಸರ್ಕಾರದ ಆದೇಶವನ್ನು ಸಕ್ರಮಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದ್ದಾರೆ.

ಸುಪ್ರೀಂಕೋರ್ಟ್ ಭಿನ್ನ ಭಿನ್ನ ತೀರ್ಪಿನ ಹಿನ್ನೆಲೆಯಲ್ಲಿ, ‘ಅಂತಿಮ ತೀರ್ಪು ಬರುವವರೆಗೂ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪು ಜಾರಿಯಲ್ಲಿರುತ್ತದೆ. ಹೈಕೋರ್ಟ್ ಈಗಾಗಲೇ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಹಾಗಾಗಿ ಹಿಜಾಬ್ ನಿಷೇಧ ಮುಂದುವರಿಯುತ್ತದೆ. ಹಿಜಾಬ್ ನಿಷೇಧ ಕುರಿತ ಶಿಕ್ಷಣ ಇಲಾಖೆಯ ಹಳೆಯ ಸುತ್ತೋಲೆಯನ್ನು ಶಾಲೆ, ಕಾಲೇಜುಗಳು ಪಾಲಿಸಬೇಕು’ ಎಂದು ಸಚಿವರು ತಿಳಿಸಿದ್ದಾರೆ.

ಇರಾನ್, ಇರಾಕ್ ಸೇರಿದಂತೆ ವಿಶ್ವದ ಬಹುತೇಕ ಮುಸ್ಲಿಂ ದೇಶಗಳಲ್ಲೇ ಮುಸ್ಲಿಂ ಮಹಿಳೆಯರು ಹಿಜಾಬ್ ಮತ್ತು ಬುರ್ಖಾ ವಿರುದ್ಧ ಬೃಹತ್ ಆಂದೋಲನ ನಡೆಸುತ್ತಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ನಮ್ಮ ಸುಪ್ರೀಂ ಕೋರ್ಟ್ ಕೂಡ ಶಾಲೆ, ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಕ್ರಮವನ್ನು ಎತ್ತಿ ಹಿಡಿಯುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ ಏಕಮತದ ತೀರ್ಪು ಬಂದಿಲ್ಲ. ನಮಗೆ ಈ ಬಗ್ಗೆ ನಿರಾಸೆ ಇಲ್ಲ. ಸುಪ್ರೀಂ ಕೋರ್ಟ್ ಪೂರ್ಣ ಪೀಠ ಸೂಕ್ತ ತೀರ್ಪು ಪ್ರಕಟಿಸಲಿದೆ ಎಂದು ಶಿಕ್ಷಣ ಸಚಿವರು ಹೇಳಿದರು.

ಇದನ್ನೂ ಓದಿರಿ: ಸುಪ್ರೀಂಕೋರ್ಟ್​ನಿಂದ ಹಿಜಾಬ್ ಕುರಿತು ವಿಭಜಿತ ತೀರ್ಪು, ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಪ್ರಕರಣ

ಯಾವುದೇ ಪಕ್ಷ ಅಥವಾ ಸಂಘಟನೆಗಳ ಕುಮ್ಮಕ್ಕಿಗೆ ಒಳಗಾಗದೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಹಠ ಬಿಟ್ಟು ಶಿಕ್ಷಣದ ಕಡೆ ಗಮನ ಹರಿಸಿ ಉಜ್ವಲ ಭವಿಷ್ಯ ಹೊಂದಬೇಕು ಎಂದು ನಾಗೇಶ್ ಮನವಿ ಮಾಡಿದರು.

ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ 1947ರಿಂದ ಈವರೆಗೆ ಮುಸ್ಲಿಂ ತುಷ್ಟೀಕರಣ ನಡೆಸುತ್ತ ಬಂದಿದೆ. ಇದರ ದುಷ್ಪರಿಣಾಮ ಮುಸ್ಲಿಮರ ಮೇಲಾಗುತ್ತಿದೆ. ತನ್ನ ಲಾಭಕ್ಕಾಗಿ ಕಾಂಗ್ರೆಸ್ ಮುಸ್ಲಿಮರ ಹಾದಿ ತಪ್ಪಿಸುತ್ತಿದೆ ಎಂದು ನಾಗೇಶ್ ಆರೋಪಿಸಿದರು.

LEAVE A REPLY

Please enter your comment!
Please enter your name here