ರಾಜ್ಯದಲ್ಲಿ ಸುರಿದ ಬಾರಿ ಮಳೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಹ ಏರ್ಪಟ್ಟಿದ್ದು, ಹಲವೆಡೆ ನೀರು ನಿಂತಿದೆ. ಈ ಮಳೆಯಿಂದಾಗಿ ರಾಜ್ಯದ ಸುಮಾರು 500 ಕ್ಕೂ ಹೆಚ್ಚು ಗ್ರಾಮಗಳು ಪ್ರವಾಹದ ನೀರಿನಲ್ಲಿ ಮುಳುಗಿವೆ. ಮಳೆಯಿಂದಾದ ಅನಾಹುತದಲ್ಲಿ ಇದುವರೆಗೆ 9 ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ.
ರಾಜ್ಯದಲ್ಲಿ ಮಳೆ ಕೊಂಚ ಕಡಿಮೆಯಾಗಿದ್ದು, ನೀರಿನ ಮಟ್ಟ ನಿಧಾನವಾಗಿ ಇಳಿಮುಖವಾಗುತ್ತಾ ಸಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನೂ ನೀರಿನ ಮಟ್ಟ ಹಾಗೆಯೇ ಇದ್ದು, ಜನಜೀವನಕ್ಕೆ ತೊಂದರೆಯನ್ನು ಉಂಟುಮಾಡಿದೆ. ಇನ್ನುಳಿದಂತೆ ಉಡುಪಿ, ದಕ್ಷಿಣಕನ್ನಡ, ಚಿಕ್ಕಮಂಗಳೂರು, ಶಿವಮೊಗ್ಗ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನೀರಿನ ಮಟ್ಟ ಇಳಿಕೆಯನ್ನು ಕಾಣುತ್ತಿದೆ.
ರಾಜ್ಯದ ಉಳಿದ ಜಿಲ್ಲೆಗಳಿಗಿಂತ ಬೆಳಗಾವಿಯಲ್ಲಿ ಅಪಾರ ಪ್ರಮಾಣದಲ್ಲಿ ಮಳೆಹಾನಿ ಉಂಟಾಗಿದೆ. ಇಲ್ಲಿ ಸಮಾರೋಪಾದಿಯಲ್ಲಿ ಪರಿಹಾರ ಕಾರ್ಯವು ನಡೆಯುತ್ತಿದೆ. ಇದಲ್ಲದೇ ಅಪಾಯಕ್ಕೆ ಸಿಲುಕಿದವರ ರಕ್ಷಣೆಗೆ ಏನ್ ಡಿ ಆರ್ ಎಫ್ ತಂಡವು ತುಂಬಾ ಶ್ರಮವಾಹಿಸಿದೆ. ಸಾವಿರಾರು ಜನರನ್ನು ಗಂಜಿಕೇಂದ್ರ ತೆರೆದು ಅಲ್ಲಿರಿಸಲಾಗಿದೆ.
ವರುಣನ ಆರ್ಭಟಕ್ಕೆ ಸಿಲುಕಿರುವ ಬೆಳಗಾವಿ ಜಿಲ್ಲೆಗೆ ಇಂದು ಮುಖ್ಯಮಂತ್ರಿಗಳು ಭೇಟಿ ನೀಡಲಿದ್ದಾರೆ. ಜಿಲ್ಲೆಯಲ್ಲಿನ ಪ್ರವಾಹ ಪೀಡಿತ ಸೇರಿದಂತೆ ಅನಾಹುತಕ್ಕೆ ಒಳಗಾದ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಇದಲ್ಲದೇ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಲಿದ್ದಾರೆ.
ಇದನ್ನೂ ಓದಿರಿ: ಜಮ್ಮು-ಕಾಶ್ಮೀರದ ಕುಲ್ಗಾಮ್ ನಲ್ಲಿ ಓರ್ವ ಉಗ್ರನ ಎನ್ ಕೌಂಟರ್
ಮುಖ್ಯಮಂತ್ರಿಗಳ ಬೆಳಗಾವಿ ಭೇಟಿಗೆ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಮತ್ತು ಕಂದಾಯ ಸಚಿವ ಆರ್ ಅಶೋಕ್ ಸಹ ಸಾತ್ ನೀಡಲಿದ್ದು, ಅನೇಕ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ನಿರೀಕ್ಷೆಗಳಿವೆ. ಇದಲ್ಲದೇ ಇಂದು ಬೆಳಗಾವಿಯಲ್ಲಿಯೇ ಶಾಸಕರು ಮತ್ತು ಅಧಿಕಾರಿಗಳ ಸಭೆ ನಡೆಸಿ ಮುಖ್ಯಮಂತ್ರಿಗಳು ಪರಿಹಾರ ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.