ಬೆಂಗಳೂರು: ಕೆಲ ದೇಶಗಳಲ್ಲಿ B.1.1.529 ಒಮೈಕ್ರಾನ್ (Omicron) ಎಂಬ ರೂಪಾಂತರಿ ಕೊರೋನಾ ವೈರಸ್ ಕಾಣಿಸಿಕೊಂಡಿದ್ದು, ಇದು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯೇ ಮಾಹಿತಿ ನೀಡಿದ್ದು, ಜನರು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.
ಹೊಸ ರೂಪಾಂತರಿ ವೈರಸ್ ಕೆಲ ದೇಶಗಳಲ್ಲಿ ಕಾಣಿಸಿಕೊಂಡಿದ್ದು, ಇದು ವೇಗವಾಗಿ ಹರಡುತ್ತಿದೆ. ಈ ಕುರಿತಂತೆ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಮಾರ್ಗಸೂಚಿಯ ಅನ್ವಯ ರೂಪಾಂತರಿ ವೈರಸ್ ಇರುವ ದೇಶದಿಂದ ಬರುವ ನಾಗರಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಟೆಸ್ಟ್ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ರಾಜ್ಯದಲ್ಲಿ 45 ಲಕ್ಷ ಮಂದಿ ಇನ್ನೂ ಎರಡನೆಯ ಲಸಿಕೆಯನ್ನು ಪಡೆದುಕೊಳ್ಳಬೇಕಿದೆ. ಮೊದಲ ಲಸಿಕೆ ತೆಗೆದುಕೊಂಡು ಅವಧಿ ಮುಗಿದಿದ್ದರೂ ಎರಡನೇ ಲಸಿಕೆ ಪಡೆದಿಲ್ಲ, ಉದಾಸೀನ, ನಿರ್ಲಕ್ಷ್ಯ ಮಾಡದೆ ಲಸಿಕೆ ಹಾಕಿಸಿಕೊಳ್ಳಿ ಎಂದು ಜನತೆಗೆ ಸಚಿವ ಸುಧಾಕರ್ ಮನವಿ ಮಾಡಿಕೊಂಡರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಔಷಧ ಕೊರತೆ ಇರಲ್ಲ. ಸೋಮವಾರದಿಂದ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ. ಎಲ್ಲ ಔಷಧ ಪೂರೈಕೆ ಮಾಡುವುದಕ್ಕೆ ಕ್ರಮಕೈಗೊಳ್ಳುತ್ತೇವೆ. ಹೊರಗೆ ಔಷಧ ತರುವಂತೆ ಚೀಟಿ ಬರೆದುಕೊಡುವುದಿಲ್ಲ. ಈ ನಿಟ್ಟಿನಲ್ಲಿ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.