1999 ರ ಜಾರ್ಕಂಡ್ ಕಲ್ಲಿದ್ದಲು ಹಂಚಿಕೆಯಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಸಚಿವ ದಿಲೀಪ್ ರೇ ಅವರಿಗೆ ದೆಹಲಿ ಸಿಬಿಐ ನ್ಯಾಯಾಲಯ ಮೂರು ವರ್ಷಗಳ ಜೈಲುಶಿಕ್ಷೆಯನ್ನು ವಿದಿಸಿದೆ.
ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರದಲ್ಲಿ ಕಲ್ಲಿದ್ದಲು ಇಲಾಖೆಯ ರಾಜ್ಯ ಸಚಿವರಾಗಿದ್ದ ಇವರು, ಅಂದು ಬ್ರಹ್ಮದೀಯ ಕಲ್ಲಿದ್ದಲು ಬ್ಲಾಕನನ್ನು ಕ್ಯಾಸ್ಟ್ರಾನ್ ಮೈನಿಂಗ್ ಲಿಮಿಟೆಡ್ ಕಂಪನಿಗೆ ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ ಎಂಬ ಆರೋಪವು ಕೇಳಿಬಂದಿತ್ತು. ಇವರೊಂದಿಗೆ ಕಲ್ಲಿದ್ದಲು ಸಚಿವಾಲಯದ ಇಬ್ಬರು ಹಿರಿಯ ಅಧಿಕಾರಿಗಳಾದ ಪ್ರದೀಪ್ ಕುಮಾರ್ ಬ್ಯಾನರ್ಜಿ ಮತ್ತು ನಿತ್ಯಾನಂದ್ ಗೌತಮ್ ಇವರ ಮೇಲೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ದೆಹಲಿ ಸಿಬಿಐ ನ್ಯಾಯಾಲಯ ಸುದೀರ್ಘ ವಿಚಾರಣೆ ನಡೆಸಿತ್ತು.
ಈ ವಿಚಾರಣೆಯಲ್ಲಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಕಳೆದವಾರ ಕೋರ್ಟ್ ಇವರನ್ನು ಅಪರಾಧಿಗಳು ಎಂದು ಘೋಷಣೆಯನ್ನು ಮಾಡಿತ್ತು. ಈ ಕುರಿತಂತೆ ಅಪರಾಧಿಗಳಿಗೆ ಶಿಕ್ಷೆಯನ್ನು ಪ್ರಕಟಿಸಿದ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿ, ಆದೇಶ ಹೊರಡಿಸಿದೆ. ಇನ್ನು ಕ್ಯಾಸ್ಟ್ರಾನ್ ಟೆಕ್ನಾಲಜಿಸ್ ಲಿಮಿಟೆಡ್ ( ಸಿಎಲ್ಟಿ) ಕಂಪನಿಯ ಅಂದಿನ ನಿರ್ದೇಶಕ ಮಹೇಂದ್ರ ಕುಮಾರ್ ಅಗರ್ವಾಲ್ ಅವರಿಗೂ ಮೂರು ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿದೆ.
ಸಿಬಿಐ ಕೋರ್ಟ್ ಎಲ್ಲ ಅಪರಾಧಿಗಳಿಗೆ ತಲಾ 10 ಲಕ್ಷ ರೂ. ದಂಡವನ್ನು ವಿಧಿಸಿದೆ. ಅಂತೆಯೇ ಸಿಎಲ್ಟಿಗೆ 60 ಲಕ್ಷ ರೂ. ಮತ್ತು ಕ್ಯಾಸ್ಟ್ರಾನ್ ಮೈನಿಂಗ್ ಲಿಮಿಟೆಡ್ (ಸಿಎಮ್ಎಲ್) ಗೆ 10 ಲಕ್ಷ ರೂ. ದಂಡವನ್ನೂ ವಿಧಿಸಿದೆ. ಈ ಕಂಪನಿಗಳು ಸಹ ಕಲ್ಲಿದ್ದಲು ಹಗರಣದ ಅಪರಾಧಿಗಳು ಎಂದು ನ್ಯಾಯಾಲಯ ತೀರ್ಮಾನ ಮಾಡಿದೆ.