dr-cn-manjunath-inaugurate-dasara-on-chamundi-hills

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಶನಿವಾರ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ ನೀಡಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ದಸರಾ ಉದ್ಘಾಟನೆ ಮಾಡಿದರು. ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಐತಿಹಾಸಿಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಬಾರಿಯ ದಸರಾಗೆ ಕೊರೋನಾ ಕರಿ ನೆರಳು ಚಾಚಿರುವ ಹಿನ್ನೆಲೆಯಲ್ಲಿ ಸರಳ ದಸರಾ ಆಚರಣೆಗೆ ಒತ್ತು ನೀಡಲಾಗಿದೆ.

ಇಂದು ಬೆಳಗ್ಗೆ 7.45 ರ ಶುಭ ಮುಹೂರ್ತದಲ್ಲಿ ಬೆಳ್ಳಿ ಪಲ್ಲಕ್ಕಿಯಲ್ಲಿ ಸರ್ವಾಲಂಕೃತಗೊಂಡಿದ್ದ ಪಂಚಲೋಹದ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ನವರಾತ್ರಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಕೊರೊನಾ ರೋಗದ ವಿರುದ್ಧ ಹೋರಾಡುತ್ತಿರುವವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಬಾರಿಯ ದಸರಾ ಮಹೋತ್ಸವವನ್ನು ಜಯದೇಯ ಹೃದ್ರೋಗ ಸಂಸ್ಥೆಯ ನಿರ್ದೇಶಕ, ಖ್ಯಾತ ವೈದ್ಯ ಡಾ.ಸಿ.ಎನ್. ಮಂಜುನಾಥ್ ಅವರಿಂದ ಉದ್ಘಾಟಿಸಲಾಗಿದೆ. ಇದೇ ವೇಳೆ ಮೈಸೂರಿನ ವೈದ್ಯಾಧಿಕಾರಿ ಡಾ.ನವೀನ್ ಟಿ.ಆರ್., ಮೈಸೂರು ಜಿಲ್ಲಾಸ್ಪತ್ರೆ ಹಿರಿಯ ಶುಶ್ರೂಷಾಧಿಕಾರಿ ರುಕ್ಮಿಣಿ, ಮೈಸೂರು ನಗರ ಪೊಲೀಸ್ ಸಿಪಿಸಿ ಪೊಲೀಸ್ ಪೇದೆ ಪಿ.ಕುಮಾರ, ನಗರ ಪಾಲಿಕೆ ಪೌರಕಾರ್ಮಿಕರಾದ ಮರಗಮ್ಮ, ನಂಜನಗೂಡು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ನೂರ್ ಜಾನ್, ಸಮಾಜ ಸೇವಕ ಆಯೂಬ್ ಅಹಮದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಇದನ್ನೂ ಓದಿರಿ: ಇಂದು ತಲಕಾವೇರಿ ತೀರ್ಥೋದ್ಭವ: ಸರಳವಾಗಿ ಹಬ್ಬದ ಆಚರಣೆ

ದಸರಾ ಉದ್ಘಾಟಿಸಿ ಮಾತನಾಡಿದ ಡಾ.ಸಿ.ಎನ್.ಮಂಜುನಾಥ್, ಕೊರೊನಾ ವಾರಿಯರ್ಸ್ ಮೃತರಾದರೆ ಅವರನ್ನು ಹುತಾತ್ಮರೆಂದು ಕರೆಯಬೇಕು. ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕೊರೊನಾ ಲಸಿಕೆ ಬೇಗ ಬರಲಿ, ಕೊರೊನಾ ಸಂಪೂರ್ಣ ನಿವಾರಣೆಯಾಗಲಿ, ಜಲಪ್ರವಾಹ ಕಡಿಮೆಯಾಗಲಿ ಎಂದು ಬೇಡಿದ್ದೇನೆ ಎಂದರು. ಚೀನಾದಲ್ಲಿ ಸೃಷ್ಟಿಯಾದ ವೈರಸ್ ಇಡೀ ಪ್ರಪಂಚವನ್ನೇ ನಡುಗಿಸಿದೆ. ಮಾಡಬಾರದ್ದು ಮಾಡಿದರೆ, ತಿನ್ನಬಾರದನ್ನು ತಿಂದರೆ ಹೇಗೆ ವೈರಸ್ ಉತ್ಪಾದನೆ ಆಗುತ್ತದೆ ಎಂಬುದಕ್ಕೆ ಈ ವೈರಸ್ ಸಾಕ್ಷಿ ಎಂದು ಹೇಳಿದರು. ಕೊರೊನಾಗೆ ಈ ವರ್ಷ ಲಸಿಕೆ ಬರುವ ಲಕ್ಷಣಗಳಿಲ್ಲ. ಮುಂದಿನ ವರ್ಷದ ಫೆಬ್ರವರಿ, ಮಾರ್ಚ್ ರಷ್ಟಕ್ಕೆ ಲಸಿಕೆ ಲಭ್ಯವಾಗಬಹುದು. ಕೊರೊನಾ ಪಾಸಿಟಿವ ಬಂದರೆ ಅವರನ್ನು ಅಸ್ಪೃಶ್ಯರ ರೀತಿ ನೋಡುವುದು ಸರಿಯಲ್ಲ, ಈ ಸೋಂಕಿನ ಚಿಕಿತ್ಸೆಯಲ್ಲಿ ವೈದ್ಯರೇ ಸೋಂಕಿಗೆ ಒಳಗಾಗುತ್ತಿದ್ದಾರೆ. ವೈದ್ಯರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ವೈದ್ಯರ ಮೇಲೆ ಹಲ್ಲೆ ಮಾಡುವುದು, ಆಸ್ಪತ್ರೆಗಳ ಮೇಲೆ ದಾಳಿ ಮಾಡುವುದು ನಿಲ್ಲಿಸಬೇಕು ಎಂದು ಮನವಿ ಮಾಡಿದರು.

dr-cn-manjunath-inaugurate-dasara-on-chamundi-hills-1

ಇದನ್ನೂ ಓದಿರಿ: ದೇಶದ ಜನತೆಗೆ ನವರಾತ್ರಿಯ ಶುಭಾಶಯ ಕೋರಿದ ಪ್ರಧಾನಿ ಮೋದಿ

ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ತಿಳಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, “ಕೊರೊನಾ ಸಂಕಷ್ಟ ಕಾಲದಲ್ಲಿ ನಾವು ನಾಡಹಬ್ಬ ನವರಾತ್ರಿಯನ್ನು ಆಚರಣೆ ಮಾಡುತ್ತಿದ್ದೇವೆ. ಲಾಕ್ ಡೌನ್ ಮತ್ತು ನೆರೆ ಹಾವಳಿಗಳಿಂದಾಗಿ ರಾಜ್ಯದ ಜನರು ಸಂಕಷ್ಟದಲ್ಲಿರುವ ಈ ಸಮಯದಲ್ಲಿ ನಾಡದೇವಿ ಚಾಮುಂಡೇಶ್ವರಿಯಲ್ಲಿ ಭಕ್ತಿಪೂರ್ವಕವಾಗಿ, ಮನುಕುಲಕ್ಕೆ ಮಾರಕವಾಗಿರುವ ಈ ರೋಗದಿಂದ ನಾಡನ್ನು ಮುಕ್ತಗೊಳಿಸಲೆಂದು ಪ್ರಾರ್ಥಿಸಿರುವುದಾಗಿ ಹೇಳಿದರು.

ಮೈಸೂರು ದಸರಾ ವಿಶ್ವ ವಿಖ್ಯಾತವಾದದ್ದು, ಈ ಸಂಪ್ರದಾಯಕ್ಕೆ ಚ್ಯುತಿಬಾರದ ರೀತಿಯಲ್ಲಿ ಮುನ್ನೆಚ್ಚರಿಕೆಯಿಂದ ಸರಳ ಮತ್ತು ಅರ್ಥಪೂರ್ಣ ಹಬ್ಬವನ್ನು ಈ ಬಾರಿ ಆಚರಿಸಲಾಗುತ್ತಿದೆ. ಸರ್ಕಾರ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳೊಂದಿಗೆ ದಸರಾ ಆಚರಿಸುವಂತೆ ನಾಡಿನ ಜನತೆಯಲ್ಲಿ ವಿನಮ್ರ ಮನವಿ ಮಾಡಿದರು.

ತಾಜಾ ಸುದ್ದಿಗಳಿಗಾಗಿ ನಮ್ಮನ್ನು ಸಾಮಾಜಿಕ ತಾಣಗಳಲ್ಲಿ ಫಾಲೋ ಮಾಡಿ
ವಾಟ್ಸಪ್ಟೆಲಿಗ್ರಾಮ್ಕೂ ಆಫ್ಫೇಸ್ ಬುಕ್ ಫೇಜ್

ಪ್ರತಿಷ್ಠಿತ ನ್ಯೂಸ್ ಆಫ್ ಗಳಲ್ಲಿ ನಮ್ಮನ್ನು ಫಾಲೋ ಮಾಡಿ
ಡೈಲಿಹಂಟ್ಗೂಗಲ್ ನ್ಯೂಸ್ 

LEAVE A REPLY

Please enter your comment!
Please enter your name here