ಹೈದರಾಬಾದ್: ಕಾರೋನಾ ಮಹಾಮಾರಿಯಿಂದ ಸಾವನ್ನಪ್ಪುವವರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಸಾವನ್ನಪ್ಪಿದವರ ಶವ ಸಂಸ್ಕಾರ ಮಾಡಲು ಕೆಲವೊಮ್ಮೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಅಂತೆಯೇ ಸಮಸ್ಯೆ ಉಂಟಾದ ಸಮಯದಲ್ಲಿ ಇಲ್ಲೊಬ್ಬ ವೈದ್ಯರು ತಾವೇ ಶವವನ್ನು ಕೊಂಡೊಯ್ದು ಶವಸಂಕಾರಕ್ಕೆ ಸಹಾಯ ಮಾಡಿದ ಘಟನೆ ನಡೆದಿದ್ದು, ಈ ಕಾರ್ಯಕ್ಕೆ ಜನರಿಂದ ಶ್ಲಾಗನೆ ವ್ಯಕ್ತವಾಗಿದೆ.
ಪೆದ್ದಂಪಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ. ಶ್ರೀನಿವಾಸ ಶ್ರೀರಾಮ್ ಅವರು ಮೃತಪಟ್ಟ ವ್ಯಕ್ತಿಯ ಶವವನ್ನು ಶವ ಸಂಸ್ಕಾರಕ್ಕೆ ಟ್ರಾಕ್ಟರ್ ಚಲಾಯಿಸಿಕೊಂಡು ಸಾಗಣೆ ಮಾಡಿದ್ದಾರೆ. 45 ವರ್ಷದ ವ್ಯಕ್ತಿಯು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದು, ಸಂಸ್ಕಾರಕ್ಕೆ ಶವ ಕೊಂಡೊಯ್ಯಲು ಮನೆಯವರು ವಾಹನಕ್ಕೆ ಹುಡುಕಾಡಿ, ಕೊನೆಗೆ ಟ್ರಾಕ್ಟರ್ ಸಿಕ್ಕಿದೆ. ಆದರೆ ಶವವನ್ನು ಕೊಂಡೊಯ್ಯಲು ಟ್ರಾಕ್ಟರ್ ಚಲಾಯಿಸಲು ಆತ ಸಿದ್ಧನಿರಲಿಲ್ಲ. ಈ ಸಮಯದಲ್ಲಿ ವಾಹನ ಚಲಾಯಿಸಲು ತಿಳಿದಿರುವ ಯಾರೂ ಇಲ್ಲದಿರುವುದರಿಂದ ಡಾ. ಶಿನಿವಾಸ್ ಶೀರಾಮ ಅವರೇ ಟ್ರಾಕ್ಟರ್ ಕೊಂಡೊಯ್ದ ಘಟನೆ ನಡೆದಿದೆ.
ನಂತರ ವೈದ್ಯರು ಮಾತನಾಡಿ, “ಕೊರೊನಾ ವೈರಸ್ ಹರಡುವಿಕೆಯ ಕುರಿತಾಗಿ ಜನರಲ್ಲಿ ಹಲವಾರು ತಪ್ಪು ಕಲ್ಪನೆಗಳು ಇವೆ. ಟ್ರಾಕ್ಟರ್ ಡ್ರೈವರ್ ಇದೇ ತಪ್ಪು ಕಲ್ಪನೆಯಿಂದ ಶವ ಸಾಗಿಸಲು ತಿರಸ್ಕರಿಸಿದ. ಜನರಲ್ಲಿ ಮೂಡಿರುವ ತಪ್ಪು ಕಲ್ಪನೆಯನ್ನು ನಿವಾರಿಸುವ ಸಲುವಾಗಿಯೇ ಟ್ರಾಕ್ಟರ್ ಚಲಾಯಿಸಿದೆ” ಎಂದು ಹೇಳಿದ್ದಾರೆ.
ವೈದ್ಯರ ಈ ಕಾರ್ಯದಿಂದಾಗಿ ಅವರ ಕುಟುಂಬಸ್ಥರು ಸಂಪ್ರದಾಯದಂತೆ ಆ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದರು. ಆಸ್ಪತ್ರೆಗಳಲ್ಲಿ ವೈದ್ಯರೂ ಮತ್ತು ಇತರ ಸಿಬ್ಬಂದಿಗಳು ಕೋವಿಡ್ ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎನ್ನುವ ಅಪವಾದದ ಮದ್ಯೆ ಈ ಘಟನೆಯು ವೈದ್ಯರ ಕಾರ್ಯದ ಬಗ್ಗೆ ಕನ್ನಡಿಯಂತಿದೆ.