ಆಹಾರ ಕಿಟ್ ವಿತರಣೆ: ಅಂತರ ಮರೆತ ಜನ, ಕಾರ್ಮಿಕ ನಿರೀಕ್ಷಕರಿಗೆ ಜಿಲ್ಲಾಧಿಕಾರಿಯವರಿಂದ ನೋಟಿಸ್

distribution-of-food-kit-notice-issued-by-dc-to-labor-forum

ಚಾಮರಾಜನಗರ: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಸರಬರಾಜಾಗಿದ್ದ ಪಡಿತರ ಕಿಟ್ ಅನ್ನು ಕಳೆದ ಜುಲೈ 9 ರಂದು ಕೊಳ್ಳೇಗಾಲದಲ್ಲಿ ಕಟ್ಟಡ ಕಾರ್ಮಿಕರಿಗೆ ವಿತರಿಸುವ ವೇಳೆ ಯಾವುದೇ ಮುನ್ನೆಚರಿಕೆ ಕ್ರಮಗಳನ್ನು ಅನುಸರಿಸದೇ ಕೋವಿಡ್ -19 ಶಿಷ್ಟಾಚಾರ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯ ಕೊಳ್ಳೇಗಾಲ ತಾಲ್ಲೂಕು ಕಾರ್ಮಿಕ ನಿರೀಕ್ಷಕರಿಗೆ ಜಿಲ್ಲಾಧಿಕಾರಿಯವರಾದ ಡಾ.ಎಂ.ಆರ್.ರವಿ ಅವರು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.

ಕೊಳ್ಳೇಗಾಲ ತಾಲ್ಲೂಕಿನಲ್ಲಿ ಹಮ್ಮಿಕೊಂಡಿದ್ದ ಪಡಿತರ ಕಿಟ್ ವಿತರಣಾ ಕಾರ್ಯದಲ್ಲಿ ಯಾವುದೇ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸಿಲ್ಲ. ಕಾರ್ಮಿಕರು ಮಾಸ್ಕ್ ಧರಿಸದೇ, ದೈಹಿಕ ಅಂತರ ಪಾಲನೆ ಮಾಡದೇ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದ್ದು, ಜನದಟ್ಟಣೆ ಉಂಟಾಗಿ ವಿತರಣಾ ಕಾರ್ಯಕ್ರಮ ಅಸ್ತವ್ಯಸ್ತವಾಗಿದ್ದು ಮಾಧ್ಯಮಗಳಲ್ಲೂ ಸಹ ವರದಿಯಾಗಿದೆ.

ಇದನ್ನೂ ಓದಿರಿ: ಕರ್ನಾಟಕದಲ್ಲಿ ಮುಂದಿನ ಎರಡು ದಿನಗಳ ಕಾಲ ಬಹುತೇಕ ಕಡೆ ಭಾರೀ ಮಳೆಯ ನಿರೀಕ್ಷೆ

ಕೋವಿಡ್ ಶಿಷ್ಟಾಚಾರ ಉಲ್ಲಂಘನೆಯಾಗಿರುವುದು ಕಂಡುಬಂದಿದ್ದು ಇದನ್ನು ಜಿಲ್ಲಾಡಳಿತ ಬಹಳ ಗಂಭೀರವಾಗಿ ಪರಿಗಣಿಸಿದೆ. ಈ ಲೋಪಕ್ಕೆ ನಿಮ್ಮ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯಿದೆ 1897 ರ ಪ್ರಕಾರ ಏಕೆ ಕ್ರಮ ಜರುಗಿಸಬಾರದು ಎಂಬುದಕ್ಕೆ ನೋಟಿಸ್ ತಲುಪಿದ ಮೂರು ದಿನಗಳ ಒಳಗಾಗಿ ಲಿಖಿತ ಸಮಜಾಯಿಷಿ ನೀಡಬೇಕು. ತಪ್ಪಿದ್ದಲ್ಲಿ ನಿಯಮಾನುಸಾರ ಮುಂದಿನ ಕ್ರಮ ಜರುಗಿಸಲಾಗುವುದೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಕೊಳ್ಳೇಗಾಲ ತಾಲ್ಲೂಕು ಕಾರ್ಮಿಕ ನಿರೀಕ್ಷರಾದ ಪಿ.ಚಂದ್ರ ಅವರಿಗೆ ನೀಡಿರುವ ನೋಟಿಸ್ ನಲ್ಲಿ ತಿಳಿಸಿದ್ದಾರೆ.

ಅಲ್ಲದೆ ಕಾರ್ಮಿಕರಿಗೆ ಪಡಿತರ ಕಿಟ್ ವಿತರಿಸಲು ಕೊಳ್ಳೇಗಾಲದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಅಸ್ತವ್ಯಸ್ತವಾಗಿದ್ದು ಕೋವಿಡ್ ಶಿಷ್ಠಾಚಾರ ಉಲ್ಲಂಘನೆ ಕಂಡುಬಂದಿದ್ದು ಈ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಯವರಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಪ್ರತ್ಯೇಕವಾಗಿ ಸೂಚನೆ ನೀಡಿದ್ದಾರೆ. ಜಿಲ್ಲೆಯ ಇತರೆ ತಾಲ್ಲೂಕಿನಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಿ ಪಡಿತರ ಕಿಟ್ ಗಳನ್ನು ವಿತರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಜಿಲ್ಲಾ ಕಾರ್ಮಿಕ ಅಧಿಕಾರಿಯವರಿಗೆ ಸೂಚಿಸಿದ್ದಾರೆ.

ಇದನ್ನೂ ಓದಿರಿ: ಜೈಪುರ: ಸೆಲ್ಫಿ ತೆಗದುಕೊಳ್ಳುವ ವೇಳೆ ಸಿಡಿಲು ಬಡಿದು 11 ಮಂದಿ ದಾರುಣ ಸಾವು, ಹಲವರಿಗೆ ಗಾಯ

LEAVE A REPLY

Please enter your comment!
Please enter your name here