ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕನ್ನಡತಿ ದೀಪಿಕಾ ಪಡುಕೋಣೆ 37 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಿನಿಮಾರಂಗದಲ್ಲಿ ಅಪಾರ ಪ್ರಮಾಣದ ಆತ್ಮೀಯರು ಹಾಗೂ ಅಭಿಮಾನಿಗಳನ್ನು ಹೊಂದಿರುವ ದೀಪಿಕಾ ಸದ್ಯ ಪಠಾಣ್ ಚಿತ್ರದ ಹಾಡೊಂದರ ಕಾಂಟ್ರವರ್ಸಿ ಮೂಲಕ ಸುದ್ದಿಯಲ್ಲಿದ್ದಾರೆ.
37 ನೇ ವಸಂತಕ್ಕೆ ಕಾಲಿಟ್ಟ ದೀಪಿಕಾ ಪಡುಕೋಣೆ ಅವರಿಗೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಆತ್ಮೀಯರು ಸೇರಿದಂತೆ ಹಲವರು ಶುಭಾಶಯ ಕೋರಿದ್ದಾರೆ.
ದೀಪಿಕಾ ಪಡುಕೋಣೆ ಮೂಲತಃ ಕರ್ನಾಟಕದವರು. ತಮ್ಮ ಕಾಲೇಜು ದಿನಗಳಲ್ಲಿಯೇ ಮಾಡೆಲಿಂಗ್ ಕ್ಷೇತ್ರಕ್ಕೆ ಧುಮುಕಿದರು. ಮಾಡೆಲಿಂಗ್ ಕ್ಷೇತ್ರದಲ್ಲಿ ಸತತ ಯಶಸ್ಸಿನ ಬಳಿಕ 2006 ರಲ್ಲಿ ಉಪೇಂದ್ರ ನಟನೆಯ ಐಶ್ವರ್ಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.
ಆ ನಂತರದಲ್ಲಿ ಬಾಲಿವುಡ್ ಕಡೆಗೆ ಮುಖ ಮಾಡಿದ ಅವರು ಶಾರುಖ್ ಖಾನ್ ನಟನೆಯ ಓಂ ಶಾಂತಿ ಓಂ ಚಿತ್ರದಲ್ಲಿ ಅವಕಾಶ ಪಡೆದರು. ಈ ಚಿತ್ರ ಅವರಿಗೆ ಬಾಲಿವುಡ್ ನಲ್ಲಿ ಉತ್ತಮ ಹೆಸರು ತಂದುಕೊಟ್ಟಿತು.
ಅವರು ಬಾಲಿವುಡ್ ನಲ್ಲಿ ಒಂದಾದ ನಂತರ ಒಂದರಂತೆ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಬಾಲಿವುಡ್ ನ ಖ್ಯಾತ ನಟ ರಣವೀರ್ ಸಿಂಗ್ ಅವರೊಂದಿಗೆ ಲವ್ ನಲ್ಲಿ ಬಿದ್ದ ಇವರು, 2018 ರ ನವೆಂಬರ್ 14 ರಂದು ಹಸೆಮಣೆ ಏರಿದರು.
ಹಿಂದಿ ಚಿತ್ರರಂಗದ ಮೂಲಕ ವಿಶ್ವದಾದ್ಯಂತ ಖ್ಯಾತಿಯನ್ನು ಪಡೆದಿದ್ದಾರೆ. ಇತ್ತೀಚಿಗೆ ಮುಕ್ತಾಯವಾದ ಫಿಫಾ ವಿಶ್ವಕಪ್ ನಲ್ಲಿ ಪಂದ್ಯದ ಟ್ರೋಫಿಯನ್ನು ಅನಾವರಣ ಮಾಡುವ ಅವಕಾಶ ಒದಗಿ ಬಂದಿತ್ತು.
ಕಳೆದ ಡಿಸೆಂಬರ್ 12 ರಂದು ಬಿಡುಗಡೆಯಾದ, ಶಾರುಖ್ ಖಾನ್ ಜೊತೆ ನಟಿಸಿರುವ ಪಠಾಣ್ ಚಿತ್ರದ ಬೇಶರಮ್ ರಂಗ್ ಹಾಡು ಭಾರಿ ವಿವಾದವನ್ನು ಹುಟ್ಟು ಹಾಕಿದೆ. ಶಾರುಖ್ ಹಾಗೂ ದೀಪಿಕಾ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಅಲ್ಲಿನ ವೇಷಭೂಷಣ ಹಾಗೂ ಹಾಡು ವಿರೋಧಕ್ಕೆ ಕಾರಣವಾಗಿತ್ತು. ‘ಬೇಷರಮ್ ರಂಗ್’ ಎಂಬ ಹಾಡಿನ ಸಾಲು ಬರುವ ಸಮಯದಲ್ಲಿ ಕೇಸರಿ ಬಿಕಿನಿ ತೊಟ್ಟಿರುವುದು ಹಲವಾರು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿರಿ: ಜನವರಿಯಲ್ಲೇ ಹಸೆಮಣೆ ಏರಲಿದ್ದಾರೆ ವಸಿಷ್ಠ ಸಿಂಹ, ಹರಿಪ್ರಿಯಾ