ಕೊರೋನಾ ಸಂಕಷ್ಟದ ಸುದ್ದಿಗಳ ನಡುವೆ ಈ ಬಾರಿ ಉತ್ತಮವಾಗಿ ಮಳೆಯಾಗಲಿದೆ ಎಂಬ ಶುಭ ಸುದ್ದಿಯನ್ನು ನೀಡಿರುವ ಭಾರತೀಯ ಹವಾಮಾನ ಇಲಾಖೆ ಇದೀಗ ಮತ್ತೊಂದು ಹೊಸ ಸುದ್ದಿ ನೀಡಿದೆ. ಈಗಾಗಲೇ ಒಂದರಮೇಲೊಂದರಂತೆ ಅಪ್ಪಳಿಸುತ್ತಿರುವ ಚಂಡಮಾರುತಗಳ ಪ್ರಭಾವದಿಂದಾಗಿ ಕರ್ನಾಟಕಕ್ಕೆ 4 ದಿನ ಮುಂಚೆಯೇ ಮುಂಗಾರು ಪ್ರವೇಶ ಮಾಡಲಿದೆ ಎಂದು ತಿಳಿಸಿದ್ದಾರೆ.
ಈ ಬಾರಿಯ ಮುಂಗಾರು ಜೂನ್ ಮೊದಲವಾರದಲ್ಲಿ ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆಯು ಈಗಾಗಲೇ ತಿಳಿಸಿತ್ತು. ಆದರೆ ಸದ್ಯದ ವಿದ್ಯಮಾನಗಳಿಂದಾಗಿ, ಅಂದರೆ ಚಂಡಮಾರುತಗಳ ಪ್ರಭಾವದಿಂದಾಗಿ ಮೇ ಕೊನೆಯ ವಾರದಲ್ಲಿಯೇ ಆರಂಭವಾಗುವ ಸೂಚನೆಯನ್ನು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಬಂದು ಹೋಗಿರುವ ತೌಕ್ತೆ ಚಂಡಮಾರುತ ಮತ್ತು ಮುಂಬರಲಿರುವ ಯಾಸ್ ಸೈಕ್ಲೋನ್ಗಳ ಪ್ರಭಾವದಿಂದಾಗಿ ಮೇ 31 ಕ್ಕೆ ಮಾನ್ಸೂನ್ ಕರ್ನಾಟಕ ಪ್ರವೇಶಿಸಲಿದೆ ಎಂದು ಹೇಳಲಾಗಿದೆ.
ಸದ್ಯ ಇಷ್ಟು ಮಾಹಿತಿಯನ್ನು ನೀಡಿರುವ ಹವಾಮಾನ ಇಲಾಖೆ ಮುಂಗಾರು ಪ್ರವೇಶಕ್ಕಾಗಿ ಕಾಯುತ್ತಿದೆ. ಮುಂಗಾರು ಪ್ರವೇಶದ ನಂತರ ಅದರ ಮಳೆ ಸುರಿಸುವ ಶಕ್ತಿಯನ್ನು ನೋಡಿಕೊಂಡು ಹೆಚ್ಚಿನ ಮಾಹಿತಿ ನೀಡುವುದಾಗಿ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿರಿ: ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಉಚಿತ ಸ್ಮಾರ್ಟ್ ಫೋನ್: ಸರ್ಕಾರದ ಚಿಂತನೆ