ಬೆಂಗಳೂರು: ಮೈಸೂರು ಐಎಎಸ್ ಅಧಿಕಾರಿಗಳ ಜಟಾಪಟಿಗೆ ರಾಜ್ಯ ಸರ್ಕಾರ ತಾರ್ಕಿಕ ಅಂತ್ಯ ನೀಡಿದ್ದು, ಮೈಸೂರು ಡಿಸಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಕಳೆದ ಕೆಲ ದಿನಗಳಿಂದ ಕೋವಿಡ್ ನಿರ್ವಹಣೆ ಕುರಿತಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರ ನಡುವೆ ವಾಗ್ವಾದ ನಡೆಯುತ್ತಿತ್ತು. ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜೀನಾಮೆ ನೀಡಿ ಬಹಿರಂಗವಾಗಿಯೇ ರೋಹಿಣಿ ಸಿಂಧೂರಿ ಅವರ ವಿರುದ್ಧ ಮಾತನಾಡಿದ್ದರು. ರಾಜ್ಯ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ಇಬ್ಬರನ್ನೂ ಕರೆಸಿ ಮಾತನಾಡಿ ಭಿನ್ನಮತ ಶಮನಕ್ಕೆ ಪ್ರಯತ್ನಿಸಿದ್ದರು. ಆದರೂ ಭಿನ್ನಮತ ಶಮನವಾಗದ ಹಿನ್ನೆಲೆಯಲ್ಲಿ ಇಂದು ರಾಜ್ಯಸರ್ಕಾರ ಇಬ್ಬರೂ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಅಧಿಕಾರಿಗಳ ಜಟಾಪಟಿಗೆ ತಾರ್ಕಿಕ ಅಂತ್ಯ ನೀಡಿದೆ.
ಇದನ್ನೂ ಓದಿರಿ: ಕೇರಳಕ್ಕೆ ಎಂಟ್ರಿ ನೀಡಿದ ಮಾನ್ಸೂನ್ : ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಶುರು.!
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಈ ಹಿಂದೆ ಇದ್ದ ಧಾರ್ಮಿಕ ದತ್ತಿ ಇಲಾಖೆಗೆ ವರ್ಗಾವಣೆ ಮಾಡಲಾಗಿದ್ದು, ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರನ್ನು ಆರ್ ಡಿ ಪಿ ಆರ್ ಇ ಆಯುಕ್ತರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಈ ಮೂಲಕ ಸರ್ಕಾರ ಇಬ್ಬರು ಅಧಿಕಾರಿಗಳ ಜಗಳಕ್ಕೆ ಮದ್ದು ಅರೆದಿದೆ.
ಇನ್ನು ವಾಣಿಜ್ಯ ತೆರಿಗೆ ಇಲಾಖೆಯ (ಜಾರಿ) ಹೆಚ್ಚುವರಿ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಗೌತಮ್ ಬಗಾದಿ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಅಂತೆಯೇ ಮೈಸೂರು ಮಹಾನಗರ ಪಾಲಿಕೆ ಆಯುಕ್ತರ ಸ್ಥಾನಕ್ಕೆ ಐಎಎಸ್ ಅಧಿಕಾರಿ ಲಕ್ಷ್ನೀಕಾಂತ್ ರೆಡ್ಡಿ ಅವರನ್ನು ನೇಮಕ ಮಾಡಿಲಾಗಿದೆ.
ಇದನ್ನೂ ಓದಿರಿ: ದ್ವಿತೀಯ PUC ಪರೀಕ್ಷೆ ರದ್ದು, ಜುಲೈ ಅಥವಾ ಆಗಸ್ಟ್ ನಲ್ಲಿ SSLC ಪರೀಕ್ಷೆ – ಇಲ್ಲಿದೆ ಸಂಪೂರ್ಣ ಮಾಹಿತಿ