ಬೆಂಗಳೂರು: ಸರ್ಕಾರಿ ಸಮಾರಂಭಗಳಲ್ಲಿ ಹಾರ-ತುರಾಯಿ ಸನ್ಮಾನ ಬೇಡ, ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಗೌರವ ವಂದನೆಗೆ ಬ್ರೇಕ್ ಹಾಕಿ ಮಾದರಿಯಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ ಇದೀಗ ಮತ್ತೊಂದು ಪ್ರಮುಖ ನಿರ್ಧಾರ ಮಾಡಿದ್ದಾರೆ.
ಸಾಮಾನ್ಯವಾಗಿ ಸಿಎಂ ಆದಿಯಾಗಿ ಸಚಿವರು, ರಾಜಕೀಯ ನಾಯಕರು ರಸ್ತೆಯಲ್ಲಿ ಹೋಗುವಾಗ ಝೀರೋ ಟ್ರಾಫಿಕ್ ವ್ಯವಸ್ಥೆಯಿರುತ್ತದೆ, ಆದರೆ ತಮಗೆ ಬೆಂಗಳೂರು ನಗರದಲ್ಲಿ ಆ ಸೌಲಭ್ಯ ಬೇಡ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ತಾವು ಸಂಚರಿಸುವಾಗ ಸಿಗ್ನಲ್ ಫ್ರೀ ಮಾಡಿಕೊಡಲು ಸೂಚಿಸಿರುವ ಸಿಎಂ, ತಮ್ಮ ಸಂಚಾರ ವೇಳೆ ಆಂಬ್ಯುಲೆನ್ಸ್ ಗೆ ಹೋಗಲು ಅವಕಾಶ ಮಾಡಿಕೊಡುವಂತೆ ಸೂಚಿಸಿದ್ದಾರೆ. ಈ ಕುರಿತಂತೆ ಸಂಚಾರಿ ಕಂಟ್ರೋಲ್ ನಿಂದ ಅಧಿಕೃತ ಆದೇಶ ಹೊರಬಿದ್ದಿದೆ.
ಈ ಹಿಂದೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕೂಡ ತಮಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡವೆಂದು ನಿರಾಕರಿಸಿದ್ದರು.
ಸಾಮಾನ್ಯವಾಗಿ ರಾಜಕೀಯ ನಾಯಕರು ರಸ್ತೆಯಲ್ಲಿ ಸಂಚರಿಸುವಾಗ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡುವುದರಿಂದ ಸಾಮಾನ್ಯ ಜನರು ಪರದಾಡುವ ಪರಿಸ್ಥಿತಿಗಳು ಉಂಟಾಗುತ್ತಿದ್ದವು. ಈ ಕಾರಣಗಳಿಂದಾಗಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಒದಗಿಬರುತ್ತಿತ್ತು. ಇದಲ್ಲದೇ ಆಂಬುಲೆನ್ಸ್ ಸಹ ಸಂಚಾರ ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕುತ್ತಿತ್ತು. ಮುಖ್ಯಮಂತ್ರಿಗಳ ಈ ನಿರ್ಧಾರದಿಂದ ಜನಸಾಮಾನ್ಯರ ಸಂಚಾರಕ್ಕೆ ರಾಜಕಾರಣಿಗಳ ಝೀರೋ ಟ್ರಾಫಿಕ್ ನಿಂದ ಉಂಟಾಗುವ ತೊಂದರೆ ನಿವಾರಣೆಯಾದಂತಾಗಲಿದೆ.