chinese-troops-withdraw-2-km-in-galwan-valley-show-new-satellite-images-03

ಗಲ್ವಾನ್ ಸಂಘರ್ಷದ ನಂತರ ಗಡಿಯಲ್ಲಿ ಜಮಾವಣೆಗೊಂಡಿದ್ದ ಚೀನಾ ಸೇನೆ ಈಗ ವಿವಾದಿತ ಈ ಸ್ಥಳದಿಂದ 2 ಕಿ.ಮೀ. ಹಿಂದಕ್ಕೆ ಸರಿದಿದೆ. ಸೇನಾ ಜಮಾವಣೆಯ ನಂತರ ಭಾರತದಿಂದ ಬಂದ ಪ್ರತಿರೋಧ, ಆರ್ಥಿಕ ಹೊಡೆತ ಮತ್ತು ರಾಜತಾಂತ್ರಿಕ ಮಾತುಕತೆಗಳ ಪರಿಣಾಮ ಉಂಟಾಗಿರುವುದು ಇಲ್ಲಿ ಸ್ಪಸ್ಟವಾಗಿ ಕಂಡು ಬರುತ್ತಿದೆ.

ಚೀನಾ ವಾಸ್ತವ ಗಡಿ ರೇಖೆಯ ಬಳಿಯಲ್ಲಿ ಸೇನೆಯನ್ನು ಜಮಾವಣೆ ಮಾಡಿ, ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಿಕೊಂದಿತ್ತು. ಇಲ್ಲಿ ಅತ್ಯಾಧುನಿಕ ಯುದ್ಧೋಪಕರಣಗಳನ್ನು ಮತ್ತು ಬೃಹತ್ ಯಂತ್ರಗಳನ್ನು ತಂದಿರಿಸಿಕೊಂಡಿತ್ತು. ಉಪಗ್ರಹ ಚಿತ್ರಗಳ ಪ್ರಕಾರ ನದಿಯ ದಿಕ್ಕನ್ನು ಬದಲಾಯಿಸುವ ಪ್ರಯತ್ನಕ್ಕೂ ಕೈ ಹಾಕಿರುವುದು ದೃಡಪಟ್ಟಿತ್ತು. ಅಲ್ಲದೆ ಗಲ್ವಾನ್ ಕಣಿವೆಯು ತನ್ನದು, ಇದರ ಮೇಲೆ ಭಾರತ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದೆ ಎಂದು ಅಂತರಾಷ್ಟೀಯ ಮಟ್ಟದಲ್ಲಿ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿತ್ತು.

ಘರ್ಷಣೆ ನಡೆದ ನಂತರ ಹಲವು ಉಭಯದೇಶಗಳ ಸೇನಾಧಿಕಾರಿಗಳ ಮಾತುಕತೆ ನಡೆದು ಫಲಪ್ರದವಾಗಿದೆ ಎಂದು ಹೇಳಲಾಗಿತ್ತು. ಈ ಮಾತುಕತೆಯಲ್ಲಿ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲು ಚೀನಾ ಒಪ್ಪಿದ್ದರೂ ತನ್ನ ಸೇನೆಯನ್ನು ಹಿಂತೆಗೆಯಲು ಮೀನಾಮೇಷ ಮಾಡುತ್ತಿರುವುದು ಕಂಡು ಬಂದಿತ್ತು. ಇದರೊಂದಿಗೆ ಭಾರತೀಯ ಹಿರಿಯ ಅಧಿಕಾರಿಗಳು, ಚೀನಾ ಸಣ್ಣ ಪ್ರಮಾಣದಲ್ಲಿ ಸೇನೆಯನ್ನು ಹಿಂತೆಗೆದುಕೊಂದಂತೆ ಮಾಡುತ್ತಿದ್ದರೂ ಅಲ್ಲಿನ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುತ್ತಿದೆ ಎಂದು ಹೇಳಿಕೆಯನ್ನು ನೀಡಿದ್ದರು.

ಯುದ್ಧದ ಕಾರ್ಮೋಡ ಹೆಚ್ಚುತ್ತಿದ್ದಂತೆ ಭಾರತದಲ್ಲಿ ಅಧಿಕ ಆದಾಯವನ್ನುಗಳಿಸುತ್ತಿದ್ದ 59 ಚೀನಾ ಮೂಲದ ಆಫ್ ಗಳನ್ನು ಭಾರತದಲ್ಲಿ ನಿಷೇಧ ಮಾಡುವ ಮೂಲಕ ಸರಕಾರ ಆರ್ಥಿಕ ಹೊಡೆತವನ್ನು ನೀಡಿತು. ಈ ಅಪ್ಲಿಕೇಷನ್ ಗಳು ಭಾರತದಲ್ಲಿನ ಮಾಹಿತಿಗಳನ್ನು ಕದಿಯುತ್ತಿವೆ ಮತ್ತು ಇವುಗಳಿಂದ ಭದ್ರತೆಗೆ ತೊಂದರೆ ಉಂಟಾಗಬಹುದೆಂಬ ಎಚ್ಚರಿಕೆಯನ್ನು ಗುಪ್ತಚರಧಳದ ಅಧಿಕಾರಿಗಳು ಎಚ್ಚರಿಸಿದ್ದರು ಎನ್ನಲಾಗಿದೆ. ಈ ಆರ್ಥಿಕ ಹೊಡೆತಕ್ಕೆ ಚೀನಾ ಕಂಗಾಲಾಗಿದ್ದಂತು ಸುಳ್ಳಲ್ಲ. ಏಕೆಂದರೆ ಕೇವಲ ಆಫ್ ಬ್ಯಾನ್ ಮಾಡಿದ್ದರಿಂದ ಏನು ತೊಂದರೆ ಉಂಟಾಗಿರದಿದ್ದರೆ ಚೀನಾದ ಹಿರಿಯ ಸಚಿವರು ಸೇರಿದಂತೆ ಅಧಿಕಾರಿಗಳ ಸಭೆಯನ್ನು ಕರೆದು ಈ ಕುರಿತು ಚರ್ಚೆ ನಡೆಸುತ್ತಿರಲಿಲ್ಲ ಅಲ್ಲವೇ ?

ಇವೆಲ್ಲವುಗಳ ನಡುವೆ ಸಮುದ್ರ ಮಟ್ಟದಿಂದ 11000 ಅಡಿಗಳಷ್ಟು ಎತ್ತರದ ಸೇನಾ ನೆಲೆ ನೀಮುಗೆ ಮೊದಲು ರಕ್ಷಣಾ ಸಚಿವರು ಬೇಟಿ ನೀಡಲಿದ್ದಾರೆ ಎಂದು ಹೇಳಲಾಗಿತ್ತಾದರೂ ಅದು ರದ್ದಾಗಿದೆ ಎಂದು ಹೇಳಿ, ನೇರವಾಗಿ ಪ್ರಧಾನಿಯೇ ಆ ಪ್ರದೇಶಕ್ಕೆ ಬೇಟಿ ನೀಡಿದ್ದರು. ಈ ಘಟನೆಯು ಇಡೀ ಪ್ರಪಂಚ ಭಾರತದೆಡೆಗೆ ತಿರುಗಿ ನೋಡುವಂತೆ ಮಾಡಿದ್ದಂತೂ ಸುಳ್ಳಲ್ಲ. ಸೈನಿಕರ ಜೊತೆಯಲ್ಲಿ ನಿಂತು, ವಿಸ್ತರಣೆಯ ಕಾಲವು ಮುಗಿದಿದೆ, ಇದು ಅಭಿವೃದ್ಧಿಯ ಕಾಲ ಎಂದು ಪರೋಕ್ಷವಾಗಿ ಚೀನಾಗೆ ತಿವಿದಿದ್ದರು.

chinese-troops-withdraw-2-km-in-galwan-valley-show-new-satellite-images
ಗಲ್ವಾನ್ ಕಣಿವೆಯ ಗಡಿನಿಯಂತ್ರಣ ರೇಖೆಯ ಬಳಿಯಲ್ಲಿನ ಉಪಗ್ರಹ ಚಿತ್ರ

ಈ ಎಲ್ಲ ಬೆಳವಣಿಗೆಗಳ ಬಳಿಕ ಭಾನುವಾರ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜೀತ್ ದೋವಲ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ವಿಡಿಯೋ ಕಾಲ್ ಮೂಲಕ ಮಾತು ಕತೆ ನಡೆದಿತ್ತು. ನೈಜ ಗಡಿನಿಯಂತ್ರಣ ರೇಖೆಯಲ್ಲಿ ಪುನಃ ಶಾಂತಿ ನೆಲೆಸಲು ಎರಡೂ ದೇಶಗಳು ಜೊತೆಯಾಗಿ ಕಾರ್ಯನಿರ್ವಹಿಸಬೇಕಿದೆ. ಗಡಿಯಲ್ಲಿನ ಈಗಿನ ಪರಿಸ್ಥಿತಿ ಸರಿಹೋಗಲು ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವುದೊಂದೇ ಮಾರ್ಗವಾಗಿದೆ. ಎಂದು ಖಡಕ್ ಆಗಿಯೇ ತಿಳಿಸಿದ್ದರು. ಇದೇ ಸಮಯದಲ್ಲಿ ಚೀನಾ ವಿದೇಶಾಂಗ ಸಚಿವ ಸೈನ್ಯವನ್ನು ಹಿಂಪಡೆಯುವಕುರಿತು ಸಕಾರಾತ್ಮಕ ಪ್ರತಿಕ್ರೀಯೆ ವ್ಯಕ್ತಪಡಿಸಿದ್ದರು.

ಜೂನ್ 28 ರಂದು ಉಪಗ್ರಹದಿಂದ ತೆಗೆದ ಚಿತ್ರದಲ್ಲಿ ಗಲ್ವಾನ್ ಕಣಿವೆಯ ಗಡಿ ನಿಯಂತ್ರಣ ರೇಖೆಯ ಬಳಿಯಲ್ಲಿ ಚೀನಾ ಸೇನೆ ಜಮಾವಣೆಗೊಂಡಿದ್ದು, ಟೆಂಟ್ ಗಳನ್ನು ನಿರ್ಮಿಸಿಕೊಂಡಿರುವುದು ಕಂಡುಬರುತ್ತದೆ. ಆದರೆ ಚೀನಾ ವಿದೇಶಾಂಗ ಸಚಿವರ ಜೊತೆಯಲ್ಲಿ ಮಾತುಕತೆ ನಡೆದ ನಂತರ ಚೀನಾ ಸೇನೆ ಅಲ್ಲಿಂದ ಜಾಗ ಕಾಲಿಮಾಡಿರುವುದು ಚಿತ್ರಗಳಲ್ಲಿ ಕಂಡುಬರುತ್ತದೆ.

ಚೀನಾ ತನ್ನ ಮಾತಿನಂತೆ ನಡೆದುಕೊಂಡು ಸೇನೆಯನ್ನು ಸದ್ಯ 2 ಕಿ.ಮೀ. ಹಿಂದಕ್ಕೆ ಪಡೆದುಕೊಂಡಿದೆ. ಇದೇ ರೀತಿ ಜುಲೈ ಅಂತ್ಯದ ವೇಳೆಗೆ ಅಲ್ಲಿಂದಲೂ ಹಿಂದಕ್ಕೆ ತೆಗೆದುಕೊಂಡು ಶಾಂತಿ ಕಾಪಾಡಲು ಸಹಕರಿಸಿದರೆ ಎಲ್ಲರಿಗೂ ಒಳಿತಾಗಲಿದೆ. ಇದನ್ನು ಬಿಟ್ಟು ಮತ್ತೆ ತನ್ನ ನರಿಬುದ್ದಿ ತೋರಿದಲ್ಲಿ ಭಾರತವು ತಾನು 1962 ರ ಭಾರತವಲ್ಲ ಎಂದು ತೋರುವ ಕಾಲವು ಬರುವುದರಲ್ಲಿ ಯಾವುದೇ ಸಂಶಯವಿಲ್ಲ.

LEAVE A REPLY

Please enter your comment!
Please enter your name here