buses-to-remain-off-road-for-second-day-as-employees-decide-to-continue-their-indefinite-agitation

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ನಾಳೆಯೂ ಮುಂದುವರೆಯಲಿದೆ ಎಂದು ಘೋಷಿಸಿದ್ದು, ಪ್ರತಿಭಟನೆ ಬಿಟ್ಟು ಮಾತುಕತೆಗೆ ಬನ್ನಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಆಹ್ವಾನಿಸಿದ್ದಾರೆ.

ಆರನೇಯ ವೇತನ ಆಯೋಗದ ಜಾರಿಗೆ ಪಟ್ಟುಹಿಡಿದಿರುವ ಸಾರಿಗೆ ನೌಕರರು ಇಂದು ಪ್ರತಿಭಟನೆಯನ್ನು ಪುನಃ ಆರಂಭಿಸಿದ್ದು, ಅನಿರ್ಧಿಷ್ಟ ಅವಧಿಯವರೆಗೆ ಮುಂದುವರೆಯಲಿದೆ ಎಂದು ಘೋಷಿಸಿದ್ದಾರೆ. ಈ ನಡುವೆ ಮಾತುಕತೆಗೂ ಸಿದ್ಧವಿಲ್ಲದ ರಾಜ್ಯಸರ್ಕಾರ ಇಂದು ಸ್ವಲ್ಪ ಮಟ್ಟಿಗೆ ಮೆತ್ತಗಾದಂತೆ ಕಂಡುಬಂದಿದ್ದು, ಮುಖ್ಯಮಂತ್ರಿಗಳು ಸಮಸ್ಯೆ ಇತ್ಯರ್ಥಕ್ಕೆ ಮಾತುಕತೆಗೆ ಆಹ್ವಾನವನ್ನು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ” ಸರಕಾರವು ಈಗಾಗಲೇ ಸಾರಿಗೆ ನೌಕರರ ಒಂಬತ್ತು ಬೇಡಿಕೆಗಳಲ್ಲಿ ಎಂಟನ್ನು ಪೂರೈಸಿದೆ. ಅಲ್ಲದೇ ಶೇ 8 ರಷ್ಟು ವೇತನ ಹೆಚ್ಚಳಕ್ಕೂ ಸಿದ್ಧವಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಅನಿರ್ದಿಷ್ಟ ಮುಷ್ಕರ ನಡೆಸುವುದು ಸರಿಯಲ್ಲ. ನಾವು ಅವರೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ, ಅವರು ಮುಷ್ಕರವನ್ನು ಕೊನೆಗೊಳಿಸಲಿ ಮತ್ತು ಸರ್ಕಾರದೊಂದಿಗೆ ಮಾತುಕತೆಗೆ ಬರಲಿ ”ಎಂದು ಅವರು ಹೇಳಿದರು.

ಇದನ್ನೂ ಓದಿರಿ: ರಾಜ್ಯದಲ್ಲಿ ಇಂದು ಕೊರೋನಾದಿಂದ 35 ಸಾವು, ಬೆಂಗಳೂರಿನಲ್ಲಿ 4,991 ಸೇರಿ 6,976 ಮಂದಿಗೆ ಪಾಸಿಟಿವ್

ಇದಕ್ಕೆ ಪ್ರತಿಯಾಗಿ ಕೆಎಸ್‌ಆರ್‌ಟಿಸಿ ಎಂಪ್ಲಾಯೀಸ್ ಲೀಗ್‌ನ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾಧ್ಯಮಗಳೊಂದಿಗೆ ಮಾತನಾಡಿ ಗುರುವಾರ ಮುಷ್ಕರ ಮುಂದುವರಿಸುವುದಾಗಿ ಘೋಷಿಸಿದರು. ಅಲ್ಲದೇ ” ನಾವು ಸರ್ಕಾರದೊಂದಿಗೆ ಮಾತನಾಡುವುದಿಲ್ಲ ಎಂದು ಹೇಳಿಲ್ಲ. ನಾವು ಮಾತುಕತೆಗೆ ಸಿದ್ಧರಿದ್ದೇವೆ. ಮುಖ್ಯಮಂತ್ರಿಗಳು ಕರೆದಾಗ ನಾವು ಮಾತುಕತೆಗೆ ಹೋಗುತ್ತೇವೆ, ಆದರೆ ಮುಷ್ಕರ ಮುಂದುವರಿಯುತ್ತದೆ ” ಎಂದು ಹೇಳಿದರು.

ಸಾರ್ವಜನಿಕ ಸಾರಿಗೆ ವಾಹನಗಳು ಇಂದು ರಸ್ತೆಗೆ ಇಳಿಯದ ಕಾರಣಗಳಿಂದ ಪ್ರಯಾಣಿಕರು ಪರದಾಡುವಂತಾಯಿತು. ಸರಕಾರ ಕಾಸಗಿ ವಾಹನಗಳ ವ್ಯವಸ್ಥೆ ಮಾಡಿದ್ದರೂ ಹಲವೆಡೆ ವಾಹನ ಇಲ್ಲದೆ ಸಾಮಾನ್ಯ ಜನರು ಒದ್ದಾಡುವಂತಾಯಿತು. ಇದಲ್ಲದೇ ಟ್ಯಾಕ್ಸಿ ಮತ್ತು ಆಟೋ ರಿಕ್ಷಾ ಚಾಲಕರು ಇದನ್ನೇ ಬಂಡವಾಳ ಮಾಡಿಕೊಂಡು ಸುಲಿಗೆಗೆ ಇಳಿದಿರುವುದು ಕಂಡುಬಂದಿತು. ಸರಕಾರ ಮತ್ತು ನೌಕರರ ಪ್ರತ್ರಿಷ್ಠೆಯ ನಡುವಿನ ಹೋರಾಟದ ಕಾರಣದಿಂದ ಸಾಮಾನ್ಯ ಜನರು ಪರದಾಡುವಾತಾಗಿದ್ದು ಸುಳ್ಳಲ್ಲ.

LEAVE A REPLY

Please enter your comment!
Please enter your name here