ಬೆಂಗಳೂರು: ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಿದಾಗಲೂ ಹೇಳಿಕೊಳ್ಳುವ ರೀತಿಯಲ್ಲಿ ಕೊರೋನಾ ಸೋಂಕಿನ ನಿಯಂತ್ರಣ ಕಾಣದ ಹಿನ್ನೆಲೆಯಲ್ಲಿ ಮುಂದಿನ 14 ದಿನಗಳ ಕಾಲ ಲಾಕ್ ಡೌನ್ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಸೋಂಕಿನ ತೀವ್ರ ಪಸರಿಕೆಯಿಂದಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮೇ 10 ರಿಂದ ಮೇ 24 ರ ವರೆಗೆ ಲಾಕ್ ಡೌನ್ ಜಾರಿಗೆ ತರಲು ರಾಜ್ಯ ಸರಕಾರ ನಿರ್ಧರಿಸಿತ್ತು. ಲಾಕ್ ಡೌನ್ ಜಾರಿಗೆ ತಂದು ಇಷ್ಟು ದಿನಗಳು ಕಳೆದಾಗಲೂ ಹೇಳಿಕೊಳ್ಳುವ ರೀತಿಯಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದಿರುವುದರಿಂದ ಜೂನ್ 7 ರ ಬೆಳಗಿನ ಜಾವ 6 ಗಂಟೆಯವರೆಗೆ ಲಾಕ್ ಡೌನ್ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ತಜ್ಞರ ಅಭಿಪ್ರಾಯ ಮತ್ತು ಸಂಪುಟ ಸಚಿವರ ಅನಿಸಿಕೆಗಳನ್ನು ಕೇಳಿದ ಮುಖ್ಯಮಂತ್ರಿಗಳು ಲಾಕ್ ಡೌನ್ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಪ್ರತಿದಿನ ಬೆಳಗ್ಗೆ 6 ರಿಂದ 10 ರ ವರೆಗೆ ಅವಕಾಶ ನೀಡಲಾಗಿದೆ. ಈ ಸಮಯ ಕಳೆದ ನಂತರವೂ ಕೆಲವರು ಸುಮ್ಮನೆ ಓಡಾಡುತ್ತಿರುವುದು ನಡೆಯುತ್ತಿದೆ. ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.