ಲಡಾಖ್: ಪೂರ್ವ ಲಡಾಖ್ ನ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆ ಕಡಿಮೆಯಾಗುತ್ತಿದೆ. ಉನ್ನತ ಮೂಲಗಳ ಪ್ರಕಾರ ಈ ಪ್ರದೇಶದಿಂದ ಚೀನಾ ಸೇನೆ ಮತ್ತು ವಾಹನಗಳು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ.
ಗಲ್ವಾನ್ ಕಣಿವೆಯಲ್ಲಿನ ಉದ್ವಿಗ್ನತೆಯ ನಂತರ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಉಭಯ ದೇಶಗಳ ನಡುವೆ ಹಲವಾರು ಸಭೆಗಳು ನಡೆದಿವೆ. ಇದರ ಪರಿಣಾಮವಾಗಿ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಲು ಚೀನಾ ಒಪ್ಪಿತ್ತು. ಅದರಂತೆ ಚೀನಾ ಸೇನೆ ಮತ್ತು ವಾಹನಗಳು ಒಂದು ಕಿಲೋ ಮೀಟರ್ ಹಿಂದಕ್ಕೆ ಸರಿಯುತ್ತಿದೆ. ಗಲ್ವಾನ್ ಕಣಿವೆಯ ಬಳಿಯಲ್ಲಿ ಚೀನಿ ಸೈನಿಕರ ಸಂಖ್ಯೆಯಲ್ಲಿ ಇಳಿಕೆಯಾಗಿರುವುದು ವರದಿಯಾಗಿದೆ.
ಜೂನ್ 22 ರಂದು ಕಮಾಂಡರ್ ಮಟ್ಟದ ಸಭೆಯು ಸುಮಾರು 11 ಗಂಟೆಗೂ ಅಧಿಕ ಸಮಯ ನಡೆದಿತ್ತು. ಭಾರತೀಯ ಸೇನೆಯ ಲೆಪ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಈ ಸಭೆಯಲ್ಲಿ ಭಾಗಿಯಾಗಿದ್ದರು. ಈ ಮಾತುಕತೆ ಫಲಪ್ರದವಾದಂತೆ ಕಂಡುಬರುತ್ತಿದೆ.
ಜೂನ್ 14 ರಂದು ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೇನೆಯ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿತ್ತು. ಇದರಲ್ಲಿ ಭಾರತೀಯ ಸೇನೆಯ ಕರ್ನಲ್ ಸಂತೋಷ ಬಾಬು ಸೇರಿದಂತೆ 20 ಯೋಧರು ವೀರಮರಣವನ್ನಪ್ಪಿದ್ದರು.