ತಂದೆಯ ಜೀವ ರಕ್ಷಿಸಿ ಸಾಹಸ ಮೆರೆದ ಬಾಲಕಿಗೆ ಶೌರ್ಯ ಪ್ರಶಸ್ತಿ !

ತಂದೆಯ ಜೀವ ರಕ್ಷಿಸಿ ಸಾಹಸ ಮೆರೆದ ಬಾಲಕಿಗೆ ಶೌರ್ಯ ಪ್ರಶಸ್ತಿ । bravery-award-for-teen-girl-who-saved-her-father

ಕಾರವಾರ: ಅಪಾಯಕ್ಕೆ ಸಿಲುಕಿದ್ದ ತಂದೆಯ ಜೀವ ರಕ್ಷಿಸಿದ ಉತ್ತರ ಕನ್ನಡ ಜಿಲ್ಲೆಯ ಬಾಲಕಿಗೆ ಸಮಾಜ ಕಲ್ಯಾಣ ಇಲಾಖೆ ನೀಡುವ ಶೌರ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರಿನ 11 ವರ್ಷದ ಬಾಲಕಿ ಕೌಸಲ್ಯ ಹೆಗಡೆ ಪ್ರಶಸ್ತಿಗೆ ಆಯ್ಕೆಯಾದ  ಬಾಲಕಿಯಾಗಿದ್ದಾಳೆ. ತಂದೆಯೊಂದಿಗೆ ವಾಹನದಲ್ಲಿ ಹೋಗುತ್ತಿರುವಾಗ ಅಪಘಾತ ಉಂಟಾಗಿ ಸಂಕಷ್ಟದಲ್ಲಿದ್ದ ಸಮಯದಲ್ಲಿ ಈಕೆ ಸಮಯ ಪ್ರಜ್ಞೆ ಮೆರೆದು ಜೀವ ಉಳಿಸಿದ್ದಾಳೆ. ಅವಳ ಈ ಕಾರ್ಯವನ್ನು ರಾಜ್ಯ ಸರಕಾರ ಗುರುತಿಸಿದ್ದು, ನವೆಂಬರ್ 14 ರಂದು ಕೆಳದಿ ಚನ್ನಮ್ಮ ಶೌರ್ಯ ಪ್ರಶಸ್ತಿಯನ್ನ ಪ್ರಧಾನಿಸಿ ಗೌರವಿಸಲಿದೆ.

ಮಾರ್ಚ್ 15, 2021 ರಂದು ಮಾವಿನಗುಂಡಿ ಸಮೀಪದ ಹಳ್ಳಿಯೊಂದಕ್ಕೆ ಅಡುಗೆ ಕೆಲಸಕ್ಕೆ ತೆರಳುತ್ತಿರುವ ತಂದೆ ವೆಂಕಟರಮಣ ಹೆಗಡೆಯವರ ಜೊತೆಗೆ ಕೌಸಲ್ಯ ಮತ್ತು ಅವಳ 5 ವರ್ಷದ ತಮ್ಮ ಸಹ ಹೊರಟಿದ್ದರು. ಪ್ರಯಾಣದ ವೇಳೆ ವೆಂಕಟರಮಣ ಹೆಗಡೆಯವರು ಚಲಾಯಿಸುತ್ತಿದ್ದ ಜೀಪು ಆಕಸ್ಮಿಕವಾಗಿ ಪಲ್ಟಿ ಹೊಡೆದಿದೆ.

ಈ ಸಮಯದಲ್ಲಿ ತಂದೆ ವಾಹನದ ಅಡಿಯಲ್ಲಿ ಸಿಲುಕಿ ಜೀವನ್ಮರಣದ ಹೋರಾಟ ಮಾಡುತ್ತಿದ್ದರು. ಈ ಸಮಯದಲ್ಲಿ ಕೌಸಲ್ಯ ಮತ್ತು ಅವಳ ತಮ್ಮ ತಂದೆಯನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗದಿದ್ದಾಗ ಕೌಸಲ್ಯ ಸಮಯ ಪ್ರಜ್ಞೆ ಮೆರೆದು,  ಕಿಲೋ ಮೀಟರ್ ನಷ್ಟು ದೂರಕ್ಕೆ ಓಡಿಹೋಗಿ ಜನರನ್ನು ಕರೆತಂದು ತಂದೆಯನ್ನು ಕಾಪಾಡಿದ್ದಾಳೆ.

ಕೌಸಲ್ಯ ವೆಂಕಟರಮಣ ಹೆಗಡೆ ಕಾನಸೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದು, ತನ್ನ ಸಣ್ಣ ವಯಸ್ಸಿನಲ್ಲಿಯೇ ಈ ರೀತಿಯ ಸಮಯಪ್ರಜ್ಞೆಯನ್ನು ತೋರಿ ತಂದೆಯನ್ನು ಬದುಕಿಸಿದ ಈಕೆಯ ಸಾಹಸ ಜನ ಮೆಚ್ಚುಗೆಗೆ ಪಾತ್ರವಾಗಿತ್ತು.

ಮಗಳ ಸಮಯ ಪ್ರಜ್ಞೆ ಮತ್ತು ಶೌರ್ಯಯದಿಂದ ಪಾರಾದ ತಂದೆ ವೆಂಕಟರಮಣ ಹೆಗಡೆ ಅವರು ತಮ್ಮ ಮಗಳಿಂದಾಗಿ ಪುನರ್ ಜೀವನ ದೊರೆತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ವೈರಲ್ ಸುದ್ದಿಗಳು 

LEAVE A REPLY

Please enter your comment!
Please enter your name here