ಇಡೀ ದೇಶದ ಗಮನವನ್ನ ತನ್ನತ್ತ ಸೆಳೆದಿದ್ದ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಇತ್ತೀಚಿನ ಮಾಹಿತಿ ಬಂದಾಗ ಗುಜರಾತಿನಲ್ಲಿ ಬಿಜೆಪಿ ಅಭೂತಪೂರ್ವ ಮುನ್ನಡೆಯನ್ನು ಕಾಯ್ದುಕೊಂಡಿದೆ. ಅದರಂತೆ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದಿದೆ.
182 ಸದಸ್ಯ ಬಲದ ಗುಜರಾತ್ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 144, ಕಾಂಗ್ರೆಸ್ 24, ಆಮ್ ಆದ್ಮಿ ಪಾರ್ಟಿ 10, ಇತರೆ 4 ಸ್ಥಾನಗಲ್ಲಿ ಮುನ್ನಡೆಯನ್ನು ಸಾಧಿಸಿವೆ. ಈ ಬಾರಿ ಗುಜರಾತಿನಲ್ಲಿ ಬಿಜೆಪಿ ಅಧಿಕಾರವನ್ನು ಹಿಡಿದರೆ ಸತತ ಏಳು ಬಾರಿ ಅಧಿಕಾರವನ್ನು ಪುನರ್ ವಹಿಸಿಕೊಂಡ ಸಾಧನೆಯನ್ನು ಮಾಡಲಿದೆ. ಅಲ್ಲದೇ ಗುಜರಾತ್ 2002 ರಲ್ಲಿ 127 ಸ್ಥಾನಗಳನ್ನು ಪಡೆದು ಅಧಿಕಾರವನ್ನು ಹಿಡಿದಿತ್ತು. ಇದು ಗುಜರಾತಿನಲ್ಲಿ ಬಿಜೆಪಿಯ ಅತ್ಯುತ್ತಮ ಸಾಧನೆಯಾಗಿ ಉಳಿದಿದೆ. ಈ ಸಾಧನೆಯನ್ನು ಬಿಜೆಪಿಯೇ ಈ ಬಾರಿ ಮುರಿಯುವ ಮೂಲಕ ಸಾಧನೆ ಮಾಡಲಿದೆಯೇ ಕಾದು ನೋಡಬೇಕಿದೆ.
ಇದನ್ನೂ ಓದಿರಿ: ಗುಜರಾತಿನಲ್ಲಿ ಮ್ಯಾಜಿಕ್ ನಂಬರ್ ದಾಟಿದ ಬಿಜೆಪಿ; ಹಿ. ಪ್ರದೇಶದಲ್ಲಿ ಕಾಂಗ್ರೆಸ್ ಮುನ್ನಡೆ
ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಕಣ ರಂಗೇರಿದೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಾವು ಏಣಿಯ ಆಟ ಎಣಿಕೆ ಆರಂಭವಾದಾಗಿನಿಂದಲೂ ಮುಂದುವರೆದಿದೆ. ಹಿಮಾಚಲ ಪ್ರದೇಶದಲ್ಲಿ 1985 ರ ನಂತರ ಯಾವುದೇ ಪಕ್ಷವು ಸತತ 2ನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿಲ್ಲ. ಬಿಜೆಪಿಯು ಈ ಬಾರಿ ಗೆಲುವು ಸಾಧಿಸಿದರೆ ಸತತ 2ನೇ ಬಾರಿಗೆ ಅಧಿಕಾರಕ್ಕೆ ಬಂದ ಪಕ್ಷ ಎನಿಸಿಕೊಳ್ಳುತ್ತದೆ. ಗುಡ್ಡಗಾಡು ರಾಜ್ಯದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದರೆ ಅದೊಂದು ದಾಖಲೆಯೇ ಆಗುತ್ತದೆ.
ಆದರೆ ಹಿಮಾಚಲ ಪ್ರದೇಶದಲ್ಲಿ ಇತ್ತೀಚಿನ ಎಣಿಕೆಯ ಫಲಿತಾಂಶ ಬಂದಾಗ ಬಿಜೆಪಿ 33, ಕಾಂಗ್ರೆಸ್ 31, ಆಮ್ ಆದ್ಮಿ ಪಾರ್ಟಿ 0, ಇತರೆ 4 ಸ್ಥಾನಗಳಲ್ಲಿ ಮುನ್ನಡೆಯನ್ನು ಸಾಧಿಸಿವೆ. ಈ ಅಂಕಿ ಅಂಶಗಳು ಎಣಿಕೆ ಆರಂಭವಾದಾಗಿನಿಂದಲೂ ಅದಲು ಬದಲಾಗುತ್ತ ಕಾತುರತೆಯನ್ನು ,ಮತ್ತಷ್ಟು ಹೆಚ್ಚಿಸಿವೆ.
ಇದನ್ನೂ ಓದಿರಿ: ದೆಹಲಿಯಲ್ಲಿ ಕೇಜ್ರಿವಾಲ್ ಮ್ಯಾಜಿಕ್; 15 ವರ್ಷದ ಬಿಜೆಪಿ ಹಿಡಿತ ಅಂತ್ಯ