ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ರಾಜೀನಾಮೆಯ ಬಳಿಕ ಅವರ ಉತ್ತರಾಧಿಕಾರಿಯ ನೇಮಕ ವಿಚಾರದಲ್ಲಿ ಹಲವು ವಿದ್ಯಮಾನಗಳು ರಾಜ್ಯದ ಜನತೆಯಲ್ಲಿ ಕುತೂಹಲ ಮೂಡಿತ್ತು. ಸದ್ಯ ಈ ಎಲ್ಲ ವಿಚಾರಗಳಿಗೆ ತೆರೆ ಬಿದ್ದಿದ್ದು, ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಹಾವೇರಿಯ ಶಿಗ್ಗಾವ್ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ್ ಬೊಮ್ಮಾಯಿ ಆಯ್ಕೆಯಾಗಿದ್ದಾರೆ.
ಯಡಿಯೂರಪ್ಪ ರಾಜೀನಾಮೆ ಬೆನ್ನಲ್ಲೇ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಯಾರು ಆಯ್ಕೆಯಾಗಬಹುದು ಎಂಬ ಕುತೂಹಲ ರಾಜ್ಯದ ಜನತೆಯಲ್ಲಿ ಮೂಡಿತ್ತು. ಈ ನಡುವೆ ದೊಡ್ಡಮಟ್ಟದಲ್ಲಿ ಹಲವಾರು ಆಕಾಂಕ್ಷಿಗಳ ಪಟ್ಟಿಯೂ ಹರಿದಾಡಿತ್ತು. ಆದರೆ ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಬೊಮ್ಮಾಯಿ ಅವರ ಹೆಸರು ಅಂತಿಮವಾಗಿದ್ದು, ಹೈಕಮಾಂಡ್ ಸಹ ಒಪ್ಪಿಗೆ ಸೂಚಿಸಿದೆ.
ಇಂದು ನೂತನ ಮುಖ್ಯಮಂತ್ರಿ ಆಯ್ಕೆಯ ಕುರಿತಂತೆ ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್ ನಲ್ಲಿ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಚುನಾವಣಾ ವೀಕ್ಷಕರಾದ ರಾಕೇಶ್ ರೆಡ್ಡಿ, ಧರ್ಮೇಂದ್ರ ಪ್ರಧಾನ್, ರಾಜ್ಯಅಧ್ಯಕ್ಷ ನಳಿನ್ ಕುಮಾರ್ ಕಟೀಲು ಸೇರಿದಂತೆ ಹಲವು ನಾಯಕರು ಬಾಗಿಯಾಗಿದ್ದರು.
ಶಾಸಕಾಂಗ ಪಕ್ಷದ ಸಭೆಯಲ್ಲಿ ಬೊಮ್ಮಾಯಿಯವರೇ ಮುಂದಿನ ಮುಖ್ಯಮಂತ್ರಿ ಎಂದು ತೀರ್ಮಾನವಾದ ನಂತರ ಹಂಗಾಮಿ ಸಿಎಂ ಯಡಿಯೂರಪ್ಪ ಅವರ ಜೊತೆಯಲ್ಲಿ ರಾಜಭವನಕ್ಕೆ ತೆರಳಿದ್ದಾರೆ. ರಾಜ್ಯಪಾಲ ತಾವರ್ ಚಂದ್ ಗೆಹಲೋಟ್ ಅವರನ್ನು ಭೇಟಿಯಾಗಿ ಹಕ್ಕುಪತ್ರ ಸಲ್ಲಿಸಿ, ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ರಾಜ್ಯಪಾಲರು ಸಮ್ಮತಿ ಸೂಚಿಸಿದ್ದು,ನಾಳೆ ಬೆಳಗ್ಗೆ 11 ಕ್ಕೆ ನೂತನ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಪ್ರತಿಜ್ಞಾ ವಿಧಿ ಸ್ವೀಕರಿಸಲಿದ್ದಾರೆ.
ಇನ್ನು ರಾಜ್ಯ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯಾಗಿ ಬೊಮ್ಮಾಯಿಯವರ ಹೆಸರು ಹೊರಬೀಳುತ್ತಿದ್ದಂತೆ ಶಿಗ್ಗಾವಿಯ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅಲ್ಲದೇ ಕ್ಷೇತ್ರದ ಜನ ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.