ಬೆಂಗಳೂರು: ಕೊರೊನಾ ಸೋಂಕಿಗೆ ಇಡಿ ಜಗತ್ತೇ ತತ್ತರಿಸಿ ಹೋಗಿದೆ. ಇದಕ್ಕೆ ಔಷಧ ತಯಾರಿಕೆಗೆ ಹಗಲಿರುಳು ಎನ್ನದೆ ಪ್ರಯತ್ನಗಳು ನಡೆಯುತ್ತಲೇ ಇವೆ. ಈ ನಡುವೆ ಭಾರತೀಯ ಪುರಾತನ ಆಯುರ್ವೇದದಲ್ಲಿ ಈ ಸೋಂಕು ನಿವಾರಣೆಗೆ ಔಷಧಗಳಿವೆ ಎಂದು ಹೇಳಲಾಗಿದ್ದರೂ ಯಾವುದೇ ಪುರಾವೆಗಳಿರಲಿಲ್ಲ. ಆದರೆ ಈಗ ಡಾ. ಗಿರಿಧರ್ ಕಜೆ ಅವರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ 10 ಸೋಂಕಿತರಿಗೆ ಚಿಕತ್ಸೆ ನೀಡಿದ್ದು, ಅವರೆಲ್ಲ ಗುಣಮುಖರಾಗಿದ್ದಾರೆ.
ಡಾ. ಗಿರಿಧರ್ ಕಜೆ ಅವರು ತನಗೆ ಅವಕಾಶವನ್ನು ಮಾಡಿಕೊಟ್ಟರೆ ಆಯುರ್ವೇದ ಚಿಕಿತ್ಸೆಯ ಮೂಲಕ ಕೊರೊನಾ ಗುಣಪಡಿಸುವುದಾಗಿ ಹೇಳಿದ್ದರು. ಇದಕ್ಕೆ ಅನುಮತಿ ದೊರೆತ ನಂತರ ಸೋಂಕಿಗೆ ಒಳಗಾದ ರೋಗಿಗಳಿಗೆ ಆಯುರ್ವೇದ ಮಾತ್ರೆಗಳು ಮತ್ತು ಔಷಧಗಳನ್ನು ನೀಡಲಾಗಿದೆ. ಆಶ್ಚರ್ಯವೆಂಬಂತೆ ಹೃದ್ರೋಗ, ಕ್ಷಯ ರೋಗ, ಮಧುಮೇಹ ರೋಗಗಳಿದ್ದವರೂ ಸಹ ಇದರಿಂದ ಗುಣಮುಖರಾಗಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಔಷಧ ಪ್ರಯೋಗ ನಡೆಸಲು ಭಾರತೀಯ ಸಂಶೋಧನಾ ಸಂಸ್ಥೆಯ ಅಧೀನ ಸಂಸ್ಥೆಯಾದ ಕ್ಲಿನಿಕಲಿ ಟ್ರಯಲ್ ರಜಿಸ್ಟರಿ ಆಫ್ ಇಂಡಿಯಾ ಅನುಮತಿಯನ್ನು ನೀಡಿತ್ತು. ಅವಕಾಶ ದೊರೆತ ನಂತರ ಅಂದರೆ ಜೂ.7 ರಿಂದ 25 ರ ವರೆಗೆ ಔಷಧವನ್ನು ನೀಡಲಾಗಿ ಎಲ್ಲ ರೋಗಿಗಳೂ ಗುಣಮುಖರಾಗಿದ್ದಾರೆ.
ಈ ಔಷಧಕ್ಕೆ 100 ರಿಂದ 180 ರೂಪಾಯಿಗಳಷ್ಟು ವೆಚ್ಚ ಆಗಲಿದೆ ಎಂದು ತಿಳಿದುಬಂದಿದೆ. ಅಲ್ಲದೆ ಡಾ. ಗಿರಿಧರ್ ಕಜೆ ಅವರು ಸೋಂಕಿತರ ಸಂಪರ್ಕಕ್ಕೆ ಬಂದ 42 ಸಾವಿರ ಸೋಂಕಿತರಿಗೆ ಉಚಿತವಾಗಿ ಆಯುರ್ವೇದ ಔಷಧ ನೀಡುವುದಾಗಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.