ಆಸ್ಟ್ರೇಲಿಯಾ (ಅ.12): ಇಂಡೊ-ಪೆಸಿಫಿಕ್ ವಲಯದ ಭದ್ರತೆ ಹಾಗೂ ಸ್ಥಿರತೆ ವಿಷಯದಲ್ಲಿ ಆಸ್ಟ್ರೇಲಿಯಾವು ಭಾರತಕ್ಕೆ ಪ್ರಮುಖ ಪಾಲುದಾರ ರಾಷ್ಟ್ರ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದರು.
ಎರಡು ದಿನಗಳ ಭೇಟಿಗಾಗಿ ಆಸ್ಟ್ರೇಲಿಯಾಗೆ ಬಂದಿರುವ ಜೈಶಂಕರ್ ಅವರು, ಇಲ್ಲಿನ ಭಾರತೀಯ ಸಮುದಾಯದ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡುತ್ತಾ, ‘ವಾಸ್ತವವಾಗಿ, ಭಾರತ – ಆಸ್ಟ್ರೇಲಿಯಾದ ಸಂಬಂಧದಲ್ಲಿ ದೊಡ್ಡ ಬದಲಾವಣೆಗಳು ಆಗಿವೆ. ಎರಡೂ ದೇಶಗಳು ಈಗ ಕ್ವಾಡ್‌ನ ಸದಸ್ಯ ರಾಷ್ಟ್ರಗಳಾಗಿವೆ. ಇಂಡೊ-ಪೆಸಿಫಿಕ್ ವಲಯದ ಭದ್ರತೆ ಹಾಗೂ ಸ್ಥಿರತೆಗಾಗಿ ಒಟ್ಟಾಗಿ ಕೆಲಸ ಮಾಡುತ್ತಿವೆ’ ಎಂದರು.
‘ಕೆಲವೇ ವಾರಗಳಲ್ಲಿ ನಾವು ಎಷ್ಟರ ಮಟ್ಟಿಗೆ ಪ್ರಗತಿ ಸಾಧಿಸಿದ್ದೇವೆ ಎಂಬುದನ್ನು ನೋಡಿದ್ದೇನೆ. ನಾವು ಆಸ್ಟ್ರೇಲಿಯಾದಲ್ಲಿ ಎರಡು ಪ್ರಮುಖ ಕಾರ್ಯಾಚರಣೆಗಳನ್ನು ನಡೆಸಿದ್ದೇವೆ. ಅದರಲ್ಲಿ ಭಾರತೀಯ ಸೇನೆಯೂ ಭಾಗವಹಿಸಿತ್ತು’ ಎಂದು ಜೈಶಂಕರ್ ಅವರು ಹೇಳಿದರು.
ಭಾರತ – ಆಸ್ಟ್ರೇಲಿಯಾ ಪರಸ್ಪರ ಭದ್ರತೆ, ಶಿಕ್ಷಣ, ಉದ್ಯಮ ಕ್ಷೇತ್ರದಲ್ಲಿನ ಸಹಕಾರ ಮತ್ತು ಅಗತ್ಯ ವ್ಯಾಪಾರ ಒಪ್ಪಂದಗಳೊಂದಿಗೆ ಮುನ್ನಡೆಯುತ್ತಿದ್ದೇವೆ. ನಮ್ಮ ಸಂಬಂಧಗಳು ಮೊದಲಿಗಿಂತಲು ವೃದ್ಧಿಯಾಗಿದ್ದು, ಇನ್ನೂ ಹೆಚ್ಚಿನ ಸಹಕಾರಗಳಿಗೆ ಮುಂದಾಗಲಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿರಿ: ಕೈಗಾ ಅಣು ವಿದ್ಯುತ್ ಸ್ಥಾವರ ವಿಸ್ತರಣೆಗೆ ಹಸಿರು ನ್ಯಾಯ ಮಂಡಳಿ ತಡೆ