ಬೆಂಗಳೂರು: ರಾಜ್ಯದಾದ್ಯಂತ ಇಂದು ಒಂದರಿಂದ ಐದನೆಯ ತರಗತಿಯ ವರೆಗಿನ ಶಾಲೆಗಳು ಆರಂಭವಾಗಿದ್ದು, ಮಕ್ಕಳು ಸಂಭ್ರಮದಿಂದ ಶಾಲೆಗಳಿಗೆ ಬಂದಿದ್ದಾರೆ. ಇದುವರೆಗೆ ಮನೆಯಲ್ಲಿಯೇ ಇದ್ದ ಮಕ್ಕಳು ಇಂದು ಶಾಲೆಗಳಿಗೆ ಬಂದಿದ್ದು, ಮಕ್ಕಳ ಮುಖದಲ್ಲಿ ಹರ್ಷ ಎದ್ದು ಕಾಣುತ್ತಿದೆ.
ರಾಜ್ಯದಲ್ಲಿ ಆರರಿಂದ ಹತ್ತನೆಯ ತರಗತಿಯ ಶಾಲೆಗಳು ಈಗಾಗಲೇ ಆರಂಭವಾಗಿದ್ದು, ತಜ್ಞರ ಮಾರ್ಗಸೂಚಿಯ ಪ್ರಕಾರ ಇಂದಿನಿಂದ 1-5 ನೇಯ ತರಗತಿಗಳು ಸಹ ಆರಂಭವಾಗಿವೆ. ಇಂದು ಶಾಲೆಗೆ ಆಗಮಿಸಲು ಮಕ್ಕಳು ಪೋಷಕರ ಒಪ್ಪಿಗೆ ಪತ್ರ ತರುವುದು ಅವಶ್ಯವಾಗಿತ್ತು. ಅಲ್ಲದೇ ಶಾಲೆಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಬೆಳಗಿನ ಒಂದು ಹೊತ್ತು ಮಾತ್ರ ಶಾಲೆಗಳು ನಡೆದವು.
ಶಾಲೆಗಳಲ್ಲಿ ಮಕ್ಕಳು ಆಗಮಿಸುತ್ತಿದ್ದಂತೆ ಮಕ್ಕಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಸ್ವಾಗತಿಸಲಾಯಿತು. ಅಲ್ಲದೇ ಕಡ್ಡಾಯವಾಗಿ ಮಾಸ್ಕ ಧರಿಸುವಂತೆ ನೋಡಿಕೊಳ್ಳಲಾಗಿದೆ. ಮುಂದಿನ ವಾರದಿಂದ ಪೂರ್ಣ ಪ್ರಮಾಣದಲ್ಲಿ ಇಡೀ ದಿನ ಶಾಲೆಗಳನ್ನು ತೆರೆಯಲಾಗುವುದು ಎಂದು ಹೇಳಲಾಗಿದೆ.